ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ, ರೇವಣ್ಣ ಅವರಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ, ಮಹಿಳೆಯ ಅಪಹರಣಕ್ಕೆ ಕಾರಣರಾಗಿದ್ದ ಇತರ ಆರೋಪಿಗಳಾದ ಹಾಸನದ ಸತೀಶ್ ಬಾಬಣ್ಣ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಹ ಮಂಜೂರು ಮಾಡಿದೆ.
ರೇವಣ್ಣ ಅವರಿಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ಹಾಗೂ ಅಪಹರಣ ಪ್ರಕರಣದಲ್ಲಿ ಜಾಮೀನು ಕೋರಿ ಇತರ 6 ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಎಸ್ಐಟಿ ಪರ ವಕೀಲರು, ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವಿರುವುದು ತನಿಖೆಯ ವೇಳೆ ಸಾಬೀತಾಗಿದೆ. ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಸಂತ್ರಸ್ತ ನೀಡಿರುವ ಹೇಳಿಕೆಯಲ್ಲಿ ರೇವಣ್ಣ ವಿರುದ್ಧದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ದಾಖಲಿಸಿಕೊಂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಐಪಿಸಿ 364ಎ ಪ್ರಕಾರ ಯಾವುದೇ ವ್ಯಕ್ತಿಯ ಅಪಹರಣದ ಬಳಿಕ ಆ ವ್ಯಕ್ತಿಯ ಜೀವಭಯ ಇರಲಿದೆ. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಬೇಕು ಎಂದು ಕೋರಿದ್ದರು.