ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ನಡೆಸಿದ್ದರು. ಇದನ್ನು ಖಂಡಿಸಿ ನಗರದ ಕ್ವೀನ್ಸ್ ರಸ್ತೆಯಿಂದ ರಾಜಭವನದ ವರೆಗೂ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯಲ್ಲಿ ದಾಖಲಾಗಿದ್ದ ಖಾಸಗಿ ದೂರು ಮತ್ತು ಆದರ ಸಂಬಂಧ ನಡೆಯುತ್ತಿದ್ದ ವಿಚಾರಣೆ ರದ್ದು ಕೋರಿ ನಲಪಾಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿಭಟನೆ ನಡೆದಿರುವ ಸಂಬಂಧ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ಇದೇ ಪ್ರಕರಣ ಸಂಬಂಧ ಐಪಿಸಿ 188ರ (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ) ಮತ್ತು ಪೊಲೀಸ್ ಕಾಯಿದೆಯ 103 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 188ರ ಉಲ್ಲಂಘನೆಯಾಗಬೇಕು ಎಂದರೆ ಜಿಲ್ಲಾಧಿಕಾರಿಗಳ ಹಂತದ ಅಧಿಕಾರಿ ಆದೇಶ ಉಲ್ಲಂಘನೆ ಮಾಡಿರಬೇಕು ಎಂಬ ನಿಯಮವಿದೆ. ಆದರೆ, ವಿಚಾರಣಾ ನ್ಯಾಯಾಲಯ ಈ ಎಲ್ಲ ಅಂಶಗಳನ್ನು ಗಮನಿಸಿದೆ ಕಾಗ್ನಿಜೆನ್ಸ್ ಪಡೆದುಕೊಂಡಿದೆ. ಆದ್ದರಿಂದ ಪ್ರಕರಣ ರದ್ದುಮಾಡಬೇಕು ಎಂದು ಕೋರಿದ್ದರು. ಈ ಅಂಶವನ್ನು ಪುರಸ್ಕರಿಸಿದ ನ್ಯಾಯಪೀಠ, ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ.