ಬೆಂಗಳೂರು:ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸದ ಹಿನ್ನೆಲೆ ಬಿಬಿಎಂಪಿ ವಿಳಂಬ ಧೋರಣೆಗೆ ಹೈಕೋರ್ಟ್ ಕಿಡಿಕಾರಿದೆ. ಬಹಳ ಬಡತನದಲ್ಲಿರುವ ಮಕ್ಕಳು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ನೀವು ಶಾಲೆಗಳ ಮೂಲ ಸೌಕರ್ಯ ಸುಧಾರಣೆ ಮಾಡುತ್ತಿಲ್ಲ. ದಶಕ ಕಳೆದರೂ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವಿವರ ನೀಡಿಲ್ಲ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ಕೆಟ್ಟ ದಾವೆದಾರರು ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಬಿಬಿಎಂಪಿ ಶಾಲೆಗಳ ಕುರಿತು ವರದಿ ಸಲ್ಲಿಸಲು ಮಾಹಿತಿ ಒದಗಿಸಲಾಗಿಲ್ಲ ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲರು ಪೀಠದ ಗಮನಸೆಳೆದರು. ಆಗ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರು ಒಂದು ವಾರದಲ್ಲಿ ಎಂಟೂ ವಲಯಗಳಲ್ಲಿರುವ ಬಿಬಿಎಂಪಿ ಶಾಲೆಗಳ ಸ್ಥಿತಿಗತಿ ವರದಿಯನ್ನು ಸವಿವರವಾಗಿ ಸಲ್ಲಿಸಲಾಗುವುದು ಎಂದರು.
ಇದರಿಂದ ತೃಪ್ತರಾದ ನ್ಯಾಯಪೀಠ, ಬಿಬಿಎಂಪಿ ಶಾಲೆಯಲ್ಲಿ ಬಡವರ ಮಕ್ಕಳು ಕಲಿಯುತ್ತಾರೆಯೇ ವಿನಃ ಬೇರೆ ಶಾಲೆಗಳಲ್ಲಲ್ಲ. ಬಿಬಿಎಂಪಿ ನಡತೆಯ ಕುರಿತು ಪೀಠ ಕಿಡಿಕಾರಿದೆ. ನಮಗೆ ಬಿಬಿಎಂಪಿ, ಬಿಡಿಎ ಮತ್ತು ಕೆಐಡಿಬಿಯಲ್ಲಿ ತುಂಬಾ ಸಮಸ್ಯೆಗಳಿವೆ. ಅವರು ಕೆಟ್ಟ ದಾವೆದಾರರು ಎಂದು ಹೇಳದೆ ವಿಧಿಯಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.