ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಎರಡೂ ಕಣ್ಣು ಕಳೆದುಕೊಂಡ ಬಾಲಕ: ₹21 ಲಕ್ಷ ಪರಿಹಾರ ಕೊಡಿಸಿದ ಹೈಕೋರ್ಟ್ - HIGH COURT

ರಸ್ತೆ ಅಪಘಾತದಲ್ಲಿ ಎರಡೂ ಕಣ್ಣು ಕಳೆದುಕೊಂಡ ಬಾಲಕನಿಗೆ 21 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ಮಾಡಿದೆ.

COMPENSATION FOR ACCIDENT A BOY LOST EYES IN ROAD ACCIDENT  BENGALURU  ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಯುವಕ
ಹೈಕೋರ್ಟ್ (ETV Bharat)

By ETV Bharat Karnataka Team

Published : Dec 30, 2024, 10:51 PM IST

ಬೆಂಗಳೂರು:ರಸ್ತೆ ಅಪಘಾತದಲ್ಲಿ ಗಾಯಗೊಂಡು ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಕರಿಕೇರದಾ ಕಿರಣ್‌ ಕುಮಾರ್‌ ಎಂಬ 17 ವರ್ಷದ ಬಾಲಕನಿಗೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ (ಎಂಎಸಿಟಿ) ನೀಡಿದ್ದ ಪರಿಹಾರವನ್ನು ಹೈಕೋರ್ಟ್ ಒಂದೂವರೆ ಪಟ್ಟು ಹೆಚ್ಚಳ ಮಾಡಿ ಆದೇಶಿಸಿದೆ.

ಸಂತ್ರಸ್ತನಿಗೆ 2017ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9ರ ಬಡ್ಡಿ ಸಹಿತ 21.8 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಸೋಂಪೋ ಜನರಲ್‌ ವಿಮಾ ಕಂಪನಿಗೆ ಸೂಚನೆ ನೀಡಿದೆ.

ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ (ಎಂಎಸಿಟಿ) ಆದೇಶ ಪ್ರಶ್ನಿಸಿ ಸಂತ್ರಸ್ತ ಕಿರಣ್‌ ಕುಮಾರ್‌ ಮತ್ತು ವಿಮಾ ಕಂಪನಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್‌. ಮುದ್ಗಲ್‌ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್‌ ಎ. ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಅಲ್ಲದೆ, ವೈದ್ಯರು ನೀಡಿರುವ ಸಾಕ್ಷಿಯಲ್ಲಿ ಅರ್ಜಿದಾರ ಎರಡೂ ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಜೊತೆಗೆ ಮುಖದಲ್ಲಿ ಗಾಯಗಳಾಗಿದ್ದವು ಎಂದು ಹೇಳಲಾಗಿದೆ. ಹಾಗೂ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಆತ ಮದುವೆ ಸೇರಿದಂತೆ ಹಲವು ಆನಂದದ ಕ್ಷಣಗಳಿಂದ ವಂಚತನಾಗಲಿದ್ದಾನೆ. ಹಾಗಾಗಿ, ಪರಿಹಾರವನ್ನು ಒಂದೂವರೆ ಪಟ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಪೀಠ ಹೇಳಿದೆ.

ವಿಮಾ ಕಂಪನಿ ಟ್ರಕ್‌ ಪರ್ಮಿಟ್‌ ಇಲ್ಲದೆ ಸಂಚರಿಸುತ್ತಿತ್ತು. ಹಾಗಾಗಿ ಪರಿಹಾರ ನೀಡಬೇಕಿಲ್ಲ ಎಂಬುದಾಗಿ ಹೇಳುತ್ತಿದೆ. ಆದರೆ ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ವಿಮಾ ಕಂಪನಿ ಮೊದಲು ಪರಿಹಾರ ಪಾವತಿಸಿ, ನಂತರ ಆ ಮೊತ್ತವನ್ನು ಟ್ರಕ್‌ ಮಾಲೀಕರಿಂದ ವಸೂಲು ಮಾಡಿಕೊಳ್ಳುವುದಕ್ಕೆ ಅವಕಾಶವಿರಲಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಬಾಲಕ 2017ರ ಮಾರ್ಚ್‌ನಲ್ಲಿ ಮಡಕಶಿರಾ-ಅಮರಾಪುರಂ ರಸ್ತೆಯಲ್ಲಿ ಹಿರೇತುರ್ಪಿ ಗ್ರಾಮದ ಅಂಜನೇಯಸ್ವಾಮಿ ದೇವಾಲಯದಲ್ಲಿ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ಕರ್ನಾಟಕದಲ್ಲಿ ನೋಂದಾಯಿಸಿದ ಟ್ರಕ್‌ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದವರಿಗೂ ಗಾಯಗಳಾಗಿದ್ದವು. ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

ಘಟನೆ ನಡೆದಾಗ ಬಾಲಕ 10 ವರ್ಷದವನಿದ್ದ. ಗಾಯಗೊಂಡಿದ್ದ ಆತನಿಗೆ ಮೊದಲು ಅನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದಾಗ ಆತನ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿರುವುದು ತಿಳಿದುಬಂದಿತ್ತು. ಇದರಿಂದ ಆತನಿಗೆ ಭವಿಷ್ಯದಲ್ಲಿ ಮದುವೆಯಾಗುವ ಸಾಧ್ಯತೆ ಕಡಿಮೆ ಅನ್ನೋದು ತಿಳಿದಿತ್ತು. ಹೀಗಾಗಿ 70 ಲಕ್ಷ ರೂ. ಪರಿಹಾರ ಕೋರಿ ಬಾಲಕನ ಪೋಷಕರು ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಮಂಡಳಿ 2019ರಲ್ಲಿ 8.3 ಲಕ್ಷ ರೂ. ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ಪೋಷಕರು ಮತ್ತು ವಿಮಾ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ರೈಲಿನಡಿ ತಳ್ಳಿ ಯುವತಿ ಕೊಂದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಚೆನ್ನೈ ಮಹಿಳಾ ಕೋರ್ಟ್​

ABOUT THE AUTHOR

...view details