ಕರ್ನಾಟಕ

karnataka

ETV Bharat / state

27 ವಾರಗಳ ಗರ್ಭಪಾತಕ್ಕೆ ಕೋರಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​ - RAPE VICTIM PLEA FOR ABORTION

ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯು ಗರ್ಭ ತೆಗೆಯಲು ವೈದ್ಯರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ​ಮೊರೆ ಹೋಗಿದ್ದಾರೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 24, 2025, 8:12 PM IST

ಬೆಂಗಳೂರು:ಅತ್ಯಾಚಾರಕ್ಕೊಳಗಾದ ಪರಿಣಾಮ ಧರಿಸಿರುವ 27 ವಾರಗಳ ಗರ್ಭ ತೆಗೆಯುವುದಕ್ಕೆ ವೈದ್ಯರಿಗೆ ನಿರ್ದೇಶಿಸುವಂತೆ ಕೋರಿ 16 ವರ್ಷದ ಬಾಲಕಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ವಾಣಿ ವಿಲಾಸ ಆಸ್ಪತ್ರೆಗೆ ಹೈಕೋರ್ಟ್‌ ತುರ್ತು ನೋಟಿಸ್ ಜಾರಿ ಮಾಡಿದೆ.

ಸಂತ್ರಸ್ತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೇ, ಅರ್ಜಿಯಲ್ಲಿ ಇತರ ಪ್ರತಿವಾದಿಗಳಾದ ಶಿವಾಜಿನಗರದ ಜಿಹೆಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆ, ಮಕ್ಕಳ ಕಲ್ಯಾಣ ಸಮಿತಿಗೆ ಮತ್ತು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಸಂತ್ರಸ್ತೆಯು ಶುಕ್ರವಾರವೇ (ಜ.24) ವಾಣಿ ವಿಲಾಸ ಆಸ್ಪತ್ರೆಗೆ ತೆರಳಿ ದಾಖಲಾಗಬಹುದು. ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸೋಮವಾರದೊಳಗೆ ಸಂತ್ರಸ್ತೆಯ ತಪಾಸಣೆಗೆ ವೈದ್ಯಕೀಯ ಮಂಡಳಿ ರಚಿಸಬೇಕು. ಅದರ ಮುಂದೆ ಸೋಮವಾರ ಸಂತ್ರಸ್ತೆ ಹಾಜರಾಗಬೇಕು. ಸಂತ್ರಸ್ತೆಗೆ ವೈದ್ಯಕೀಯ ಗರ್ಭಪಾತ ಮಾಡುವ ಸಾಧ್ಯತೆ ಬಗ್ಗೆ ಮಂಡಳಿ ತಪಾಸಣೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತು.

ಒಂದೊಮ್ಮೆ ಜ.29ರೊಳಗೆ ಮಂಡಳಿ ವರದಿ ಸಲ್ಲಿಸಿದರೆ, ಸಂತ್ರಸ್ತೆ ಹಾಗೂ ಆಕೆಯ ತಾಯಿ ನ್ಯಾಯಾಲಯದ ಮುಂದೆ ಬಂದು ಮುಂದಿನ ಕ್ರಮಕ್ಕಾಗಿ ಕೋರಬಹುದು ಎಂದು ಪೀಠ ಇದೇ ವೇಳೆ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಾಯಿ 2025ರ ಜ.16ರಂದು ಪೊಲೀಸರಿಗೆ ದೂರು ನೀಡಿ, ನನ್ನ 16 ವರ್ಷದ ಮಗಳ ಮೇಲೆ ಯುವಕನೊಬ್ಬ ಕಳೆದ ಆರು - ಏಳು ತಿಂಗಳಿಂದ ನಿಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಪುತ್ರಿ ಗರ್ಭ ಧರಿಸಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರು. ಜ.18ರಂದು ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಆಕೆಗೆ ಗರ್ಭಕ್ಕೆ 26 ವಾರ, 6 ದಿನ ಆಗಿರುವುದು ತಿಳಿದಿತ್ತು.

ಇದನ್ನೂ ಓದಿ:ಬೆಂಗಳೂರು: ಅತ್ಯಾಚಾರ ಮಾಡಿ ಮಹಿಳೆಯ ಹತ್ಯೆ, ನಿರ್ಜನ ಪ್ರದೇಶದಲ್ಲಿ ಶವ ಪತ್ತೆ

ಈ ಮಧ್ಯೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಕೋರಿದ್ದರು. ಸಮಿತಿಯು 2025ರ ಜ.21ರಂದು ಈ ಕುರಿತು ವರದಿ ನೀಡಿತ್ತು. ನಂತರ ಸಂತ್ರಸ್ತೆಯನ್ನು ಸರ್ಕಾರಿ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ತನ್ನ ತಾಯಿ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸಂತ್ರಸ್ತೆ, ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು. ಗರ್ಭಪಾತ ಮಾಡಲು ವೈದ್ಯಕೀಯ ಮಂಡಳಿ ರಚನೆ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪರಾಧಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ABOUT THE AUTHOR

...view details