ಬೆಂಗಳೂರು:ತನ್ನಿಂದ ದೂರವಿರುವ ಪತಿಯಿಂದ ಪ್ರತಿ ತಿಂಗಳು 6 ಲಕ್ಷ ರೂಪಾಯಿ ಜೀವನಾಂಶ ಕೋರಿದ ಪತ್ನಿಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಆಕೆ ಇಷ್ಟು ಹಣವನ್ನು ಖರ್ಚು ಮಾಡಬೇಕೆಂದು ಬಯಸಿದರೆ ತಾನೇ ದುಡಿಯುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರಿದ್ದ ನ್ಯಾಯಪೀಠ ಕೈಗೆತ್ತಿಕೊಂಡಿತು.
ನ್ಯಾಯಾಲಯದ ಪ್ರಕ್ರಿಯೆ ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದುಕೊಳ್ಳುವವರಿಗೆ ಸ್ಪಷ್ಟವಾದ ಸಂದೇಶವನ್ನು ಹಾಲಿ ಪ್ರಕರಣದ ಮೂಲಕ ಹೊರಡಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿತು.
ಅರ್ಜಿದಾರ ಮಹಿಳೆಯ ಖರ್ಚಿಗೆ 6,16,300 ಬೇಕೇ? ಪ್ರತೀ ತಿಂಗಳಿಗೆ? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು. ಆಕೆಯ ಅಗತ್ಯವೇನು? ಪತಿ 10 ಕೋಟಿ ಸಂಪಾದಿಸಬಹುದು, ಹಾಗೆಂದು ನ್ಯಾಯಾಲಯ ಆಕೆಗೆ 5 ಕೋಟಿ ರೂ ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ, ಹಾಗಾದರೆ ಅವರು ಸಂಪಾದಿಸಲಿ ಎಂದು ಪೀಠ ಗರಂ ಆಗಿ ಪ್ರತಿಕ್ರಿಯಿಸಿತು.
ಅಲ್ಲದೆ, ನಿರೀಕ್ಷಿತ ವೆಚ್ಚಗಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಪತ್ನಿ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಇತರೆ ಹೊಣೆಗಾರಿಕೆಯ ವಿಚಾರ ಪ್ರಸ್ತಾಪಿಸಿಲ್ಲ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಪತ್ನಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ವಿಚಾರಣೆಯಲ್ಲಿ ಪತ್ನಿಯ ಪರ ವಕೀಲರು, ಅರ್ಜಿದಾರೆಗೆ ಪೌಷ್ಟಿಕಾಂಶಯುಕ್ತ ಆಹಾರ ಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾಗಿದೆ. ಊಟಕ್ಕೆ ತಿಂಗಳಿಗೆ 40,000 ಬೇಕಿದೆ. ತನ್ನನ್ನು ತೊರೆದಿರುವ ಪತಿ ಪ್ರತಿದಿನ ಬ್ರಾಂಡೆಡ್ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಶರ್ಟಿನ ಬೆಲೆ 10,000 ಇದೆ. ಆದರೆ ತಾನು ಹಳೆಯ ಬಟ್ಟೆ ಧರಿಸಬೇಕಿದೆ. ಬಟ್ಟೆ, ಸೌಂದರ್ಯ ವರ್ಧಕ, ಔಷಧಿಗಳ ವೆಚ್ಚ ಮತ್ತು ಇತರೆ ವಸ್ತುಗಳ ಖರೀದಿಗೆ 60,000 ಬೇಕು ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ದಾವೆದಾರರು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ. ನಿಮ್ಮ ಕಕ್ಷಿದಾರರಿಗೆ ಅರ್ಥವಾಗುತ್ತಿಲ್ಲ. ಆದರೆ, ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡಬೇಕು. ಆಕೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ಇದು ಕೊನೆಯ ಅವಕಾಶ ಎಂದು ತಿಳಿಸಿತು.
ಪತಿ ಪರ ವಕೀಲ ಆದಿನಾಥ್ ನರ್ದೆ ಅವರು ಆಕೆಯ ಬ್ಯಾಂಕ್ ಸ್ಟೇಟ್‌ಮೆಂಟ್ ಪ್ರಕಾರ, ವಿವಿಧ ಕಡೆ 63 ಲಕ್ಷ ರೂ ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ದಾಖಲಿಸಿದೆ. ಇದಕ್ಕೆ ಪತ್ನಿ ಪರ ವಕೀಲ ಆಕ್ಷೇಪಿಸಿದ್ದು, ಜೀವನಾಂಶ ಕೋರಿಕೆ ತನ್ನ ವಾಸ್ತವಿಕ ಖರ್ಚು ವೆಚ್ಚವಲ್ಲ, ಅದು ನಿರೀಕ್ಷಿತ ವೆಚ್ಚವಾಗಿದೆ ಎಂದರು.
ಇದನ್ನೂ ಓದಿ:ಮಧುಮೇಹದ ಕಾರಣ ನೀಡಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್