ಬೆಂಗಳೂರು :ಆಂಬ್ಯುಲೆನ್ಸ್ (ಆರೋಗ್ಯ ಕವಚ-108) ವಾಹನಗಳ ಸಿಬ್ಬಂದಿಗೆ ವೇತನ ನೀಡುವ ವ್ಯವಸ್ಥೆ, ಈ ಸಂಬಂಧ ಸರ್ಕಾರ ಯಾವಾಗೆಲ್ಲ ಆದೇಶಗಳನ್ನು ಹೊರಡಿಸಿದೆ, ಸರ್ಕಾರ ಮತ್ತು ಖಾಸಗಿ ಸೇವಾ ಸಂಸ್ಥೆ ನಡುವೆ ಆಗಿರುವ ಒಡಂಬಂಡಿಕೆಗಳ ಕುರಿತು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರ ಹಾಗೂ ಜಿವಿಕೆ-ಇಎಂಆರ್‌ಐ ಸಂಸ್ಥೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಆರೋಗ್ಯ ಕವಚ-108 ನೌಕರರ ಪರವಾಗಿ ಅಖಿಲ ಕರ್ನಾಟಕ 108 ಆಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆಂಬ್ಯುಲೆನ್ಸ್ ನೌಕರರ ಸಂಘ, ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ಆಂಬ್ಯುಲೆನ್ಸ್ ನೌಕರರ ಸಂಘ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಅಲ್ಲದೆ, 108 ಆಂಬ್ಯುಲೆನ್ಸ್ ನೌಕರರು ತುರ್ತು ಮತ್ತು ಅಗತ್ಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಅವರ ವೇತನಕ್ಕೆ ವಿಳಂಬ ಮಾಡುವುದು ಸೂಕ್ತವಲ್ಲ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದರ ಜೊತೆಗೆ ಅವರ ಕುಟುಂಬಗಳ ನಿರ್ವಹಣೆ ಆಗಬೇಕು. 108 ಆಂಬ್ಯುಲೆನ್ಸ್ ನೌಕರರ ವೇತನ ಹೆಚ್ಚಿಸುವ ಸಂಬಂಧ ನಡೆದ ಸಭೆಯಲ್ಲಿ ಏನು ಚರ್ಚೆಯಾಗಿದೆ? ನಂತರ ಕೈಗೊಂಡ ಕ್ರಮಗಳೇನು? ನೌಕರರಿಗೆ ವೇತನ ನೀಡುವ ವ್ಯವಸ್ಥೆ ಏನು? ಅದಕ್ಕಾಗಿ ಸರ್ಕಾರ ಯಾವಾಗೆಲ್ಲ ಆದೇಶಗಳನ್ನು ಹೊರಡಿಸಿದೆ? ಸರ್ಕಾರ ಮತ್ತು ಖಾಸಗಿ ಸೇವಾ ಸಂಸ್ಥೆಗಳ ನಡುವೆ ಆಗಿರುವ ಒಡಂಬಡಿಕೆಗಳೇನು? ಎಂಬ ಬಗ್ಗೆ ಸಮಗ್ರ ಮಾಹಿತಿಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರ ಹಾಗೂ ಜಿವಿಕೆ-ಇಎಂಆರ್‌ಐ ಸಂಸ್ಥೆಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿತು.
ಆರೋಗ್ಯ ಕವಚ 108 ಸಿಬ್ಬಂದಿಗೆ ವೇತನ ಹೆಚ್ಚಳ ಸಂಬಂಧ 2022ರ ಅ.ರಂದು ನಡೆದ ಸರ್ಕಾರ, ಜಿವಿಕ-ಇಎಂಆರ್‌ಐ ಸಂಸ್ಥೆ ಹಾಗೂ ನೌಕರರ ಪ್ರತಿನಿಧಿಗಳನ್ನೊಳಗೊಂಡ ತ್ರಿಪಕ್ಷ ಸಮಿತಿಯ ಸಭೆಯಲ್ಲಿ ಒಪ್ಪಿಕೊಳ್ಳಲಾಯಿತು. ಅದರಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಅದೇಶ ಅ.11ಕ್ಕೆ ಸರ್ಕಾರ ಆದೇಶ ಹೊರಡಿಸಿತು. ಅದರಂತೆ, 2022ರ ಆಗಸ್ಟ್ ತಿಂಗಳಿಂದ 2023ರ ಮಾರ್ಚ್ ತಿಂಗಳ ತನಕ ವೇತನ ನೀಡಲಾಯಿತು. 2022ರ ಆಗಸ್ಟ್ಗಿಂತ ಮುಂಚೆ ಈ ನೌಕರರಿಗೆ ಕನಿಷ್ಠ ವೇತನ ಇರಲಿಲ್ಲ. ಮಾಸಿಕ 9ರಿಂದ 16 ಸಾವಿರ ವೇತನ ಇತ್ತು. ಶೇ.15ರಷ್ಟು ವೇತನ ಹೆಚ್ಚಳದಿಂದ 36ರಿಂದ 37 ಸಾವಿರ ವೇತನ ಸಿಗುತ್ತಿತ್ತು. ಆದರೆ, ಇದೀಗ ಆ ವೇತನವನ್ನು ಕೊಡುತ್ತಿಲ್ಲ. ಹಿಂದೆ ನೀಡಿದ್ದ ಹೆಚ್ಚುವರಿ ವೇತನವನ್ನೂ ಕಡಿತಗೊಳಿಸಲಾಗುತ್ತಿದೆ. ಜತೆಗೆ, ಗಾಯದ ಮೇಲೆ ಬರೆ ಎಂಬಂತೆ ಆರೋಗ್ಯ ಕವಚ ಸಿಬ್ಬಂದಿ ವಿರುದ್ಧ ಎಸ್ಮಾ ಕಾಯ್ದೆ ಜಾರಿ ಮಾಡಲಾಗಿದೆ. ದಿನದಲ್ಲಿ 12 ತಾಸು ಕೆಲಸ ಮಾಡುತ್ತಿರುವ ಮೂರು ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ತಿಂಗಳಿಗೆ ಬರೀ 14ರಿಂದ 15 ಸಾವಿರ ರೂ. ವೇತನ ಸಿಗುತ್ತಿದೆ. ಈ ಅನ್ಯಾಯ ಸರಿಪಡಿಸಿ, ಅವರಿಗೆ ನ್ಯಾಯಯುತ ವೇತನ ಹಾಗೂ ಇತರೆ ಸೌಲಭ್ಯಗಳು ಸಿಗುವಂತೆ ಮಾಡಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ:108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್ - dinesh gundurao