ಬೆಂಗಳೂರು :ಸರ್ಕಾರಿ ನೌಕರರಾಗಿದ್ದೂ ಕಾನೂನು ಪದವಿ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಸನ್ನದ್ದು ನೀಡಲು ನಿರಾಕರಿಸಿದ್ದ ರಾಜ್ಯ ವಕೀಲರ ಪರಿಷತ್ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಬೀದರ್ನ ಸಿವಿಲ್ ನ್ಯಾಯಾಲಯದ ಮಾಜಿ ಸಹಾಯಕ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಸರ್ಕಾರಿ ನೌಕರರಾಗಿದ್ದು, ಕಾನೂನು ಪದವಿ ಪಡೆದಿದ್ದಾರೆ. ತರಗತಿಗಳಿಗೆ ಹಾಜರಾಗಿರುವ ಸಂಬಂಧ ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂದು ತಿಳಿಸಿದ್ದ ಪರಿಷತ್ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು. ಈ ಕ್ರಮವನ್ನು ರದ್ದು ಪಡಿಸಿದ ನ್ಯಾಯಪೀಠ, ವಿಶ್ವವಿದ್ಯಾಲಯವು ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಪ್ರಮಾಣಪತ್ರ ಮತ್ತು ಘಟಿಕೋತ್ಸವ ಪ್ರಮಾಣಪತ್ರ ನೀಡಿದೆ. ಹೀಗಾಗಿ ಪ್ರಮಾಣ ಪತ್ರವನ್ನು ನೀಡಲು ಅಭ್ಯರ್ಥಿಯು ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? :ಅರ್ಜಿದಾರಪ್ರಾರಂಭದಲ್ಲಿ ಟೈಪಿಸ್ಟ್ ಆಗಿ ನೇಮಕಗೊಂಡ ನಂತರ, ಅವರು ಎಲ್ಎಲ್ಬಿ ಕೋರ್ಸ್ ಮಾಡಲು ನಿರ್ಧರಿಸಿದರು. ಇದಕ್ಕಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅನುಮತಿ ನೀಡಿದ್ದರು. ಹೀಗಾಗಿ, ಅವರು 2000ನೇ ವರ್ಷದಲ್ಲಿ ಕೋರ್ಸ್ಗೆ ಸೇರಿ, ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅದರಂತೆ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಘಟಿಕೋತ್ಸವ ಪ್ರಮಾಣಪತ್ರ ಪ್ರದಾನ ಮಾಡಲಾಗಿತ್ತು.