ಬೆಂಗಳೂರು: ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶ ಸಂಬಂಧ ಗೊಂದಲಗಳ ನಿವಾರಣೆಗೆ ಸರ್ಕಾರದ ಪ್ರತಿನಿಧಿಗಳು ಹಾಗೂ ಅರ್ಜಿದಾರರು ಚರ್ಚೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಹೈಕೋರ್ಟ್ ತಿಳಿಸಿದೆ. ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ಅಲ್ಲದೇ, ಇದೇ ಧಾಟಿಯಲ್ಲಿ ಹಾಡಬೇಕು ಎಂಬುದಾಗಿ ನಿರ್ದೇಶನ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಹೊರತುಪಡಿಸಿ ಈ ರೀತಿಯಲ್ಲಿ ಹಾಡುವಂತೆ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ನಾಡಗೀತೆಯನ್ನು ವಿವಿಧ ಶಾಲೆಗಳಲ್ಲಿ ನಾನಾ ಬಗೆಯಲ್ಲಿ ಮಕ್ಕಳು ಒಟ್ಟಾಗಿ ಹಾಡಿದಾಗ ಗೊಂದಲವಾಗದಿರುವಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರ ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಹಾಡುವಂತೆ ಆದೇಶಿಸಿರಬಹುದು. ಸರ್ಕಾರದ ಇಲಾಖೆಗಳು, ನಿಗಮ ಮಂಡಳಿಗಳ ಕಚೇರಿಗಳಲ್ಲಿ ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ರಾರಂಭಕ್ಕೂ ಮುನ್ನ ನಾಡಗೀತೆ ಕಡ್ಡಾಯ ಎಂಬುದಾಗಿ ತಿಳಿಸಿದೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಗೊಂದಲವಾಗದಿರಲಿ ಎಂಬ ಕಾರಣದಿಂದ ಈ ಆದೇಶ ಮಾಡಿರಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ಈ ಆದೇಶ ವ್ಯಕ್ತಿಯ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಧಕ್ಕೆ ಉಂಟು ಮಾಡುತ್ತದೆ. ಇದೇ ರೀತಿಯಲ್ಲಿ ನಾಡಗೀತೆ ಹಾಡಬೇಕು ಎಂದು ಹೇಳುವುದು ಎಷ್ಟು ಸರಿ. ಈ ಆದೇಶ ಒಪ್ಪುವಂತದ್ದಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದೆ.
ಈ ಹಿಂದೆ ಡಾ. ಸಿ. ಅಶ್ವಥ್ ಅವರು ರಾಗ ಸಂಯೋಜನೆ ಮುಂದುವರಿಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿ ಅವರು ಒಪ್ಪಿಕೊಂಡಿದ್ದರು. ಆದ ಕಾರಣ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ವಕೀಲರು, ಸರ್ಕಾರ ಹೊರಡಿಸಿದ್ದ ಆದೇಶದ ಕುರಿತಾಗಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಪ್ರಕರಣದ ಹಿನ್ನೆಲೆ:ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಅರ್ಜಿ ಸಲ್ಲಿಸಿದ್ದಾರೆ. ನಾಡಗೀತೆಗೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು 2013ರ ಜೂನ್ 12ರಂದು ವಸಂತ ಕನಕಪುರ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ವಿಚಾರಗಳಿಗೆ ವಿರುದ್ಧವಾಗಿದೆ. ಡಾ. ಸಿ. ಅಶ್ವಥ್ ಅವರ ರಾಗ ಸಂಯೋಜನೆ ಮುಂದುವರೆಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿ ಅವರು ಒಪ್ಪಿಕೊಂಡಿದ್ದರು. ಅಲ್ಲದೇ, ರಾಜ್ಯ ಸರ್ಕಾರ ನಾಡೋಜ ಚನ್ನವೀರ ಕಣವಿ ನೇತೃತ್ವದ ಸಮಿತಿಯ ಶಿಫಾರಸನ್ನು ಕಡೆಗಣಿಸಿದೆ. ಅಶ್ವಥ್ ರಾಗ ಸಂಯೋಜನೆಯನ್ನು ಸಮಿತಿ ಶಿಫಾರಸು ಮಾಡಿತ್ತು ಎಂದಿದ್ದರು.
ಅಲ್ಲದೆ, ಮೈಸೂರು ಅನಂತಸ್ವಾಮಿಯವರು ಫೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ನಾಡಗೀತೆಯ ರಾಗ, ಧಾಟಿ ಮತ್ತು ಸಮಯದ ಮಿತಿ ಕುರಿತು ರಾಜ್ಯ ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದೆ. ಹೀಗಾಗಿ, ಆಕ್ಷೇಪಾರ್ಹವಾದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ:ಸನಾತನ ಧರ್ಮದ ಕುರಿತ ಹೇಳಿಕೆ: ಖುದ್ದು ಹಾಜರಾಗುವಂತೆ ಉದಯನಿಧಿ ಸ್ಟಾಲಿನ್ಗೆ ಬೆಂಗಳೂರು ಕೋರ್ಟ್ ಸಮನ್ಸ್