ಬೆಂಗಳೂರು: ಶಾಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಒಂದು ಆದ್ಯತೆಯ ಹಕ್ಕು ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಏಕಸದಸ್ಯ ಪೀಠದ ಅಭಿಪ್ರಾಯವನ್ನು ಅಂಗೀಕರಿರುವ ಹೈಕೋರ್ಟ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನಿವೃತ್ತ ನೌಕರರ ಮೊಮ್ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿರುವ ಕ್ರಮ ಎತ್ತಿಹಿಡಿದಿದೆ.
ಐಐಎಸ್ಸಿಯ ನಿವೃತ್ತ ನೌಕರರ ಮೊಮ್ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕೆ ಅವಕಾಶ ನೀಡದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ಮಾಸ್ಟರ್ ಶಮಂತ್ ಮತ್ತಿತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಮೇಲ್ಮನವಿದಾರರ ಅಂಶ ಪರಿಗಣಿಸಲಾಗದು: 2023 - 24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಾಜಿ ನೌಕರರರ ಮೊಮ್ಮಕ್ಕಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿಕೊಳ್ಳುವುದಕ್ಕೆ ಅವಕಾಶವಿತ್ತು ಎಂಬ ಅರ್ಜಿದಾರರ ಮನವಿ ತಿರಸ್ಕರಿಸಿರುವ ನ್ಯಾಯಪೀಠ, ಹಿಂದಿನ ವರ್ಷದ ಮಾರ್ಗಸೂಚಿಗಳಲ್ಲಿ ಹೊಸದಾಗಿ ಹೊರಡಿಸಿರುವ(2024-25ನೇ ಸಾಲಿನ) ಮಾರ್ಗಸೂಚಿಗಳಲ್ಲಿ ಅದಕ್ಕೆ ಅವಕಾಶ ಇಲ್ಲದಿದ್ದಾಗ ಮೇಲ್ಮನವಿದಾರರು ಕೋರಿರುವ ಅಂಶಗಳನ್ನು ಪರಿಗಣಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.
2024-25ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಿಯಂತ್ರಿಸುವ ಮಾರ್ಗಸೂಚಿಗಳಲ್ಲಿ ಅಂತಹ ಆದ್ಯತೆಯನ್ನು ನಿರ್ದಿಷ್ಟವಾಗಿ ಒದಗಿಸದಿದ್ದಾಗ ಮೇಲ್ಮನವಿದಾರರ ಪ್ರವೇಶವನ್ನು 2023-24ರ ಮಾರ್ಗಸೂಚಿಗಳ ಅಡಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಮೇಲ್ಮನವಿದಾರರು 2024-25ರ ಮಾರ್ಗಸೂಚಿಗಳನ್ನು ಪ್ರಶ್ನಿಸಿಲ್ಲ. ಹೀಗಾಗಿ, ಮೊಮ್ಮಕ್ಕಳನ್ನು ಆದ್ಯತೆಯಿಂದ ಹೊರಗಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಹಸ್ತಕ್ಷೇಪದ ಅಗತ್ಯವಿಲ್ಲ:ಅಲ್ಲದೇ, ಪ್ರವೇಶಕ್ಕೆ ಪರಿಗಣನೆಗೆ ಪಟ್ಟಭದ್ರ ವಿಷಯವೆಂದು ಹೇಳಲಾಗುವುದಿಲ್ಲ ಮತ್ತು 2024-25ನೇ ಸಾಲಿಗೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಅಂತಹ ಆದ್ಯತೆ ಒದಗಿಸದಿದ್ದಾಗ ಕೋಟಾ ವಿಸ್ತರಿಸಲಾಗುವುದಿಲ್ಲ ಎಂದು ಏಕಸದಸ್ಯ ಪೀಠ ತಿಳಿಸಿದೆ. ಅಲ್ಲದೇ, ಏಕಸದಸ್ಯ ಪೀಠ 2024-25ರ ಮಾರ್ಗಸೂಚಿಗಳಲ್ಲಿನ ಬದಲಾವಣೆ ಸಂಬಂಧ ನೀಡಿರುವ ಆದೇಶದಲ್ಲಿ ಯಾವುದೇ ದೋಷವಿಲ್ಲ. ಈ ನಿಟ್ಟಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.