ಬೆಂಗಳೂರು:ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದೂ ವ್ಯಕ್ತಿ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿದ ಮತ್ತು ಆತನಿಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರು ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಚಿತ್ರದುರ್ಗದ ನಿವಾಸಿಗಳಾದ ಯೂನಸ್ ಅಹ್ಮದ್, ನವೀದ್, ಸಯ್ಯದ್ ಸಾದತ್ ಮತ್ತು ಜಾಫರ್ ಸಿದ್ದಕಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣ ಸಂಬಂಧ ದಾಖಲೆ ಪರಿಶೀಲಿಸಿದರೆ, ಕ್ಷುಲ್ಲಕ ವಿಚಾರಕ್ಕೆ ಘಟನೆ ಸಂಭವಿಸಿದೆ ಎನ್ನುವುದು ತಿಳಿಯುತ್ತದೆ. ಅರ್ಜಿದಾರರು ಸೇರಿದಂತೆ ಗುಂಪೊಂದು ದೂರುದಾರರ ಮೇಲೆ ಕೈ, ಕಾಲು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದೆ. ಅವರ ಕಾರು ಹಾನಿಗೊಳಿಸಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದೆ. ಅರ್ಜಿದಾರರು 2024ರ ಏ.4ರಿಂದ ಬಂಧನದಲ್ಲಿದ್ದು, ತನಿಖೆಯು ಗಣನೀಯ ಪ್ರಮಾಣದಲ್ಲಿ ಪ್ರಗತಿ ಹೊಂದಬಹುದಿತ್ತು. ಕಸ್ಟಡಿಯಲ್ ವಿಚಾರಣೆ ಸಹ ಪೂರ್ಣಗೊಳ್ಳುತ್ತಿತ್ತು. ಅರ್ಜಿದಾರರರು ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಲಾಗಿದೆ.
ಅಲ್ಲದೆ, ಅರ್ಜಿದಾರರು ತಲಾ ಎರಡು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯಕ್ಕೆ ನಿಯಮಿತವಾಗಿ ಹಾಜರಾಗಬೇಕು. ಪ್ರತಿ ತಿಂಗಳ ಎರಡನೇ ಭಾನುವಾರದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ನಡುವೆ ತನಿಖಾಧಿಕಾರಿ ಮುಂದೆ ಹಾಜರಬೇಕು. ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೇ ಅದರ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ. ಸಾಕ್ಷಿಗಳನ್ನು ಬೆದರಿಸುವ ಅಥವಾ ಸಾಕ್ಷ್ಯಧಾರಗಳನ್ನು ತಿರುಚಲು ಯತ್ನಿಸಬಾರದು ಈ ಷರತ್ತುಗಳನ್ನು ಉಲ್ಲಂಘಿಸಿದರೆ ಅರ್ಜಿದಾರರ ಜಾಮೀನು ರದ್ಧತಿಗೆ ಪೊಲೀಸರು ನ್ಯಾಯಾಲಯವನ್ನು ಕೋರಬಹುದು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ:''ನಾನು 2024ರ ಏ.2ರಂದು ಮಧ್ಯಾಹ್ನ 2.30ರ ವೇಳೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಜೈ ಕನ್ನಡ ನಿವಾಸ ಸಂಸ್ಥೆಯ ಆವರಣದಲ್ಲಿ ಮುಸ್ಲಿಂ ಮಹಿಳೆ ಮಾತನಾಡಿಕೊಂಡು ಕುಳಿದಿದ್ದೆ. ಅದನ್ನು ಆಕ್ಷೇಪಿಸಿ ಅರ್ಜಿದಾರರು ಸೇರಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ 18ರಿಂದ 20 ವ್ಯಕ್ತಿಗಳು ಬಲವಂತವಾಗಿ ಸಂಸ್ಥೆಯ ಆವರಣಕ್ಕೆ ನುಗ್ಗಿದ್ದರು. ನನ್ನನ್ನು ಹಿಡಿದು ನೆಲಕ್ಕೆ ಬೀಳಿಸಿ, ಇಟ್ಟಿಗೆ, ಹಂಡೆ ಮತ್ತು ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದರು. ಎಳೆದುಕೊಂಡು ಹೋಗಿ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಬಟ್ಟೆಗಳನ್ನು ಹರಿದು ಹಾಕಿ, ಕೊರಳಿನಲ್ಲಿದ್ದ 55 ಗ್ರಾಂ ಚಿನ್ನದ ಸರ, ಕೈಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್ ಮತ್ತು 20 ಗ್ರಾಮ ತೂಕದ ಎರಡು ಉಂಗುರು, ಜೇಬಿನಲ್ಲಿದ್ದ 40 ಸಾವಿರ ನಗದು ದೋಚಿದರು'' ಎಂದು ಬಿ.ಎಚ್. ಗೌಡ್ರು ಎಂಬುವರು ಚಿತ್ರದುರ್ಗ ಗ್ರಾಮೀಣಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಚಿತ್ರದುರ್ಗ ಗ್ರಾಮೀಣಾ ಠಾಣಾ ಪೊಲೀಸರು ಅರ್ಜಿದಾರರ ವಿರುದ್ಧ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ, ಅಕ್ರಮ ಕೂಟ ಸೇರಿದ, ಕಿಡಿಗೇಡಿತನ, ಗಲಭೆ, ದರೋಡೆ, ಅತಿಕ್ರಮ ಪ್ರವೇಶ, ಕೊಲೆಯತ್ನ ಅಪಾಯಕಾರಿ ವಸ್ತುಗಳಿಂದ ಹಲ್ಲೆ ನಡೆಸಿದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು.
ಇದೇ ಪ್ರಕರಣ ಸಂಬಂಧ ಮಹಿಳೆ ಕೂಡ ಬಿ.ಎಚ್. ಗೌಡ್ರು ವಿರುದ್ಧ 2024ರ ಏ.3ರಂದು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದರು. ಬಿ.ಎಚ್. ಗೌಡ್ರು ಅವರ ದೂರು ಸಂಬಂಧ ಚಿತ್ರದುರ್ಗ ಗ್ರಾಮೀಣಾ ಠಾಣಾ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಜಾಮೀನು ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಚಿತ್ರದುರ್ಗ ಜಿಲ್ಲೆಯ 1ನೇ ಹೆಚ್ಚುವರಿ ಸಿವಿಲ್ (ಕಿರಿಯ ಶ್ರೇಣಿಯ) ಮತ್ತು ಜೆಂಎಫ್‌ಸಿ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಜಮೀನಿನ ಕಂದಾಯ ದಾಖಲೆ ಬದಲಿಸಲು ಲಂಚ: ಪಿಡಿಒ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ - High Court