ಬೆಂಗಳೂರು:ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಆರೋಪ ಪ್ರಕರಣವನ್ನು ಟೀಕಿಸುವ ಭರದಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಹಿಳೆಯರಿಗೆ ಮಾನಹಾನಿಯಾಗುವಂತೆ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿದಾರರಿಗೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ.
ಆಲ್ ಇಂಡಿಯಾ ದಲಿತ ಆಕ್ಷನ್ ಕಮಿಟಿಯ ರಾಷ್ಟ್ರಾಧ್ಯಕ್ಷ ಚಿ.ನಾ.ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅಲ್ಲದೆ, ದಂಡದ ಮೊತ್ತವನ್ನು ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗದು. ಈ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
ವಕೀಲರ ವಾದವೇನು?:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರವೆಸಗಿದ್ದಾರೆ. ಅವರು ಸಂಸದರಾಗಿದ್ದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಆರೋಪಿಸಿದ್ದರು. ಈ ಹೇಳಿಕೆ ಮೂಲಕ ಸ್ಥಳೀಯ ಮಹಿಳೆಯರನ್ನು ಅವಮಾನಿಸಿದ್ದು, ಪ್ರತಿ ಮನೆಗಳಲ್ಲಿಯೂ ಮಹಿಳೆಯರನ್ನು ಸಂಶಯದಿಂದ ನೋಡುತ್ತಿದ್ದಾರೆ. ಇದು ಮಹಿಳೆಯರ ಗೌರವಕ್ಕೆ ಧಕ್ಕೆ ತರವಂತಾಗಿದ್ದು, ತನಿಖೆಗೆ ಆದೇಶಿಸಿದಬೇಕು'' ಎಂದು ಕೋರಿದರು.
''ಅಲ್ಲದೆ, ಪ್ರಜ್ವಲ್ ರೇವಣ್ಣ ವಿರುದ್ದ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದು, 400 ಮಹಿಳೆಯರ ವಿರುದ್ಧ ಅತ್ಯಾಚಾರ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಚುನಾವಣೆಯಲ್ಲಿ ಮತ ಸೆಳೆಯಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದೊಂದು ದ್ವೇಷದ ಭಾಷಣ ಮಾಡಿದಂತೆ. ಮೋದಿ ಹೆಸರಿನವರು ಕಳ್ಳರು ಎಂದು ಹೇಳಿದಂತಹ ಹೇಳಿಕೆಯೇ ಆಗಿದೆ. ಈ ಬಗ್ಗೆ ಸರ್ಕಾರ, ಮಹಿಳಾ ಆಯೋಗಗಳು ದೂರು ದಾಖಲಿಸಿಲ್ಲ. ಕನಿಷ್ಠ ನಿಯಂತ್ರಣದಿಂದ ಮಾತನಾಡಬೇಕು. ಹೀಗಾಗಿ, ನೋಟಿಸ್ ಜಾರಿ ಮಾಡಬೇಕು'' ಎಂದು ವಕೀಲರು ಪೀಠಕ್ಕೆ ಮನವಿ ಮಾಡಿದರು.
ಅರ್ಜಿಯಲ್ಲಿ ಏನಿದೆ?:ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡುವ ಮೂಲಕ ಆಕೆಗೆ ಅವಮಾನ, ನೋವು, ವೇದನೆ ಉಂಟು ಮಾಡಿರುವ ಅಸಾಂವಿಧಾನಿಕ ಭಾಷಣಕ್ಕೆ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೋರಲು ಆದೇಶಿಸಬೇಕು. ರಾಹುಲ್ ಹೊರತುಪಡಿಸಿದ ಪ್ರತಿವಾದಿಗಳು ಪ್ರತ್ಯೇಕವಾಗಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಸಲ್ಲಿಸಲು ಆದೇಶಿಸಬೇಕು. ಮಹಿಳೆಯ ಘನತೆಗೆ ಹಾನಿ ಮಾಡಿರುವ ರಾಹುಲ್ ಹಾಗೂ ಇತರೆ ಪ್ರತಿವಾದಿಗಳಿಗೆ ಸಾರ್ವಜನಿಕ ಹುದ್ದೆಯ ದುರ್ಬಳಕೆ, ಸಾರ್ವಜನಿಕ ನಂಬಿಕೆಗೆ ಹಾನಿ, ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಗಾಗಿ ಭಾರತೀಯ ನ್ಯಾಯ ಸಂಹಿತೆಯ ಅಡಿ ಸಾಂಕೇತಿಕ ದಂಡ ವಿಧಿಸಬೇಕು ಎಂದು ಮನವಿ ಮಾಡಲಾಗಿತ್ತು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಮೇ 2ರಂದು ಶಿವಮೊಗ್ಗದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಅವರು, ಹಾಸನದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ಆ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಇಂತಹ ಅಭ್ಯರ್ಥಿಯ ಪರವಾಗಿ ಮತ ಕೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕ್ಷಮೆ ಕೋರಬೇಕು ಎಂದಿದ್ದಾರೆ. ಈ ಮೂಲಕ ಮಹಿಳೆಯ ಘನತೆಗೆ ವಿಶೇಷವಾಗಿ ಹಾಸನ ಭಾಗದ ಮಹಿಳೆಯರ ಘನತೆಗೆ ಹಾನಿ ಮಾಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹರಡಿದ್ದು, ಮತ ಗಳಿಕೆಗೆ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತದ ಮಹಿಳೆಯ ಘನತೆಗೆ ಹಾನಿ ಮಾಡಿದ್ದಾರೆ. ಅಧಿಕಾರಿಗಳೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ:ನಾನು ಯೋಗೇಶ್ವರ್ ಭೇಟಿನೂ ಮಾಡಿಲ್ಲ, ಮಾತನಾಡಿಯೂ ಇಲ್ಲ: ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟೋಕ್ತಿ