ಬೆಂಗಳೂರು: ನಗರದ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದಾರೆ ಎನ್ನಲಾದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ಜಯಲಲಿತಾ ಸೊಸೆ ಜೆ.ದೀಪಾ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ನ್ಯಾಯಪೀಠ, ತಡೆಯಾಜ್ಞೆಯನ್ನು ವಿಸ್ತರಿಸಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಯಲಲಿತಾ ಪ್ರಕರಣದ ವಿಚಾರಣಾ ನಡೆದಿದ್ದರ ವೆಚ್ಚವಾಗಿ ತಮಿಳುನಾಡು ಸರ್ಕಾರ ಕರ್ನಾಟಕ ಸರ್ಕಾರಕ್ಕೆ 5 ಕೋಟಿ ರೂ. ನೀಡಬೇಕು ಎಂದು ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಈ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಸ್ತುತ ಅರ್ಜಿ ಚಿನ್ನಾಭರಣ ಹಸ್ತಾಂತರ ಕುರಿತದ್ದಾಗಿದ್ದು, 5 ಕೋಟಿ ರೂ. ಬಿಡುಗಡೆಗೆ ತಡೆ ನೀಡುವ ಕುರಿತಂತೆ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ, ''ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂ ಕೋರ್ಟ್ನಿಂದ ತೀರ್ಪು ಬರುವ ಮುನ್ನವೇ ಅವರು ಮೃತಪಟ್ಟಿದ್ದರು. ಆದ ಕಾರಣ ಅವರನ್ನು ಆರೋಪಮುಕ್ತರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ, ಅರ್ಜಿದಾರರು ಜಯಲಲಿತಾರ ಕಾನೂನುಬದ್ಧ ವಾರಸುದಾರರಾಗಿದ್ದು, ಅವರ ಎಲ್ಲ ಚಿನ್ನಾಭರಣಗಳನ್ನು ಅರ್ಜಿದಾರರಿಗೆ ಹಸ್ತಾಂತರ ಮಾಡಬೇಕು'' ಎಂದು ಕೋರಿದ್ದರು.
ವಿಶೇಷ ನ್ಯಾಯಾಲಯದ ಆದೇಶವೇನು?:ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನಗರದ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, 2024ರ ಮಾರ್ಚ್ 6 ಮತ್ತು 7ರಂದು ಜಯಲಲಿತಾರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕ ನಿಗದಿ ಮಾಡಿತ್ತು. ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದು, ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರದಾನ ಕಾರ್ಯದರ್ಶಿ, ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಮತ್ತು 6 ದೊಡ್ಡ ಪೆಟ್ಟಿಗೆ (ಟ್ರಂಕ್) ಜತೆಗೆ ಅಗತ್ಯ ಭದ್ರತೆಯೊಂದಿಗೆ ಬಂದು ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು. ಈ ಅಂಶವನ್ನು ತಮಿಳುನಾಡು ಡಿವೈಎಸ್ಪಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿತ್ತು.
ಏನೆಲ್ಲಾ ವಸ್ತುಗಳಿವೆ?: 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂ. ನಗದು ಸೇರಿದಂತೆ ಹಲವು ವಸ್ತುಗಳನ್ನು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ:ಕೋರ್ಟ್ ಕಲಾಪ ಬಹಿಷ್ಕರಿಸುವ ವಕೀಲರ ಅಮಾನತು: ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾವ - High court