ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆಗೆ ತ್ವರಿತಗತಿಯ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು. ಎರಡೂ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವಾಸುದೇವ್ ಭಗವಾನ್ ಸೂರ್ಯವಂಶಿ ಹಾಗೂ ಅಮಿತ್ ಬಡ್ಡಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯಲ್ಲಿ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಎಂ.ಎಂ. ಕಲಬುರ್ಗಿ ಅವರ ಕೊಲೆಗೆ ಬಳಸಲಾದ ವಾಹನ ಕಳವು ಮಾಡಲಾದ ಆರೋಪ ಮಾತ್ರ ಅರ್ಜಿದಾರರ ಮೇಲಿದೆ. ಆರೋಪಿಗಳು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲೂ ಆರೋಪಿಗಳ ಪಾತ್ರವಿದೆ ಎಂಬ ಆರೋಪವಿದೆ. ಇದರ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಆರಂಭಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕಲಬುರ್ಗಿ ಪ್ರಕರಣದಲ್ಲಿ 138 ಸಾಕ್ಷಿಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ಈಗ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಸದ್ಯಕ್ಕೆ ಮುಗಿಯುವ ಸಾಧ್ಯತೆ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಅಲ್ಲದೆ, 2019ರ ಜುಲೈ 14ರಂದು ತನಿಖಾಧಿಕಾರಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದುವರೆಗೆ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ವಿಚಾರಣೆಯ ನೆಪದಲ್ಲಿ ದೀರ್ಘಕಾಲ ಆರೋಪಿಗಳನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಗೌರಿ ಲಂಕೇಶ್ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದರು.