ಬೆಂಗಳೂರು:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಪೋಕ್ಸೋ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಜು.15 ರಂದು ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯಿತಿ ನೀಡಿ ಆದೇಶಿಸಿದೆ. ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಎಸ್ಪಿಪಿ ಬಿ.ಎನ್.ಜಗದೀಶ್, ಅರ್ಜಿಯ ಸಂಬಂಧ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಆದರೆ, ಪ್ರಸ್ತುತ ಅವರು ರಾಜ್ಯದಲ್ಲಿ ಇಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಯಡಿಯೂರಪ್ಪ ಪರ ವಕೀಲರು, ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದ್ದರಿಂದ ಇಂದೇ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ಕೋರಿದರು. ಇದನ್ನು ತಳ್ಳಿಹಾಕಿದ ಪೀಠ, ಮುಂದಿನ ವಿಚಾರಣೆಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿ ಆದೇಶಿಸಿತು.
ಆನಂತರ ಸಂತ್ರಸ್ತೆಯ ತಾಯಿಯಾದ ದೂರುದಾರೆಯು ಸಾವನ್ನಪ್ಪಿರುವುದರಿಂದ ಯಾರನ್ನು ಪ್ರತಿವಾದಿಯನ್ನಾಗಿಸಬೇಕು ಎಂಬ ವಿಚಾರ ನ್ಯಾಯಾಲಯದ ಜಿಜ್ಞಾಸೆಗೆ ಒಳಪಟ್ಟಿತು. ಸಂತ್ರಸ್ತೆಯನ್ನೇ ಪ್ರತಿವಾದಿಯಾಗಿ ಮಾಡಬಹುದು ಎಂದು ಹೆಚ್ಚುವರಿ ಎಸ್ಪಿಪಿ ಜಗದೀಶ್ ಹೇಳಿದರು. ಆಕೆ ಅಪ್ರಾಪ್ತೆಯಾಗಿರುವುದರಿಂದ ಹಾಗೆ ಮಾಡಲಾಗದು ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.