ಕರ್ನಾಟಕ

karnataka

ETV Bharat / state

ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಕೊಳೆಗೇರಿಗಳಿಗೆ ಮನೆ ನಿರ್ಮಾಣ ಪ್ರಶ್ನಿಸಿದ್ದ ಅರ್ಜಿ ವಜಾ - ಹೈಕೋರ್ಟ್

ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಿಸಲು ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.

high court-
ಬಿಕ್ಷುಕರ ಪರಿಹಾರ ಕೇಂದ್ರದಲ್ಲಿ ಮನೆ ನಿರ್ಮಾಣ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

By ETV Bharat Karnataka Team

Published : Feb 13, 2024, 10:06 PM IST

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಮಾಗಡಿ ರಸ್ತೆಯ ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಕೆಲವು ಭಾಗವನ್ನು ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಲು ನಿಗದಿಪಡಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಪರಿಹಾರ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ, ಕೇಂದ್ರ ಪರಿಹಾರ ಸಮಿತಿ ಅನಗತ್ಯವಾಗಿ ಏಳು ವರ್ಷಗಳ ಕಾಲ ವ್ಯಾಜ್ಯವನ್ನು ಜೀವಂತವಾಗಿಟ್ಟಿದೆ ಮತ್ತು ಇದರಿಂದ ಕೊಳಗೇರಿ ನಿವಾಸಿಗಳಿಗೆ ಪುನರ್‌ವಸತಿ ಲಭ್ಯವಾಗಿಲ್ಲ ಎಂದು ತಿಳಿಸಿದೆ. ಸರ್ಕಾರ ಭಿಕ್ಷುಕರ ಪರಿಹಾರ ಕೇಂದ್ರದ ಜಾಗದಲ್ಲಿ ಹೆಚ್ಚಿನ ಭೂಮಿ ಪಡೆದಿದ್ದರೆ ಆಗ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಆದರೆ, ಇಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿರುವ ಅರ್ಜಿ ಊರ್ಜಿತವಾಗದು ಎಂದು ಪೀಠ ಆದೇಶಿಸಿತು.

ಕೊಳೆಗೇರಿ ನಿರ್ಮೂಲನಾ ಮಂಡಳಿ ತಡ ಮಾಡದೆ ಆದಷ್ಟು ಬೇಗ ಕೊಳಗೇರಿ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ, ರಾಜ್ಯ ಸರ್ಕಾರದ ಒಂದು ಅಂಗ ಇನ್ನೊಂದು ಅಂಗ ಸಂಸ್ಥೆಯ ಮೇಲೆ ಹೋರಾಟ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿದ್ದ ಕಾರಣ ಕೊಳೆಗೇರಿ ನಿವಾಸಿಗಳು ಹಲವು ವರ್ಷಗಳಿಂದ ವಸತಿ ಸೌಕರ್ಯವಿಲ್ಲದೆ ಬಳಲುವಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ವ್ಯಾಜ್ಯವನ್ನು ಬಗೆಹರಿಸಲು ಮುಂದಾಗಬೇಕು ಎಂದು ಪೀಠ ತಿಳಿಸಿದೆ.

ಇದರ ಜತೆಗೆ, ಕೇಂದ್ರಕ್ಕೆ ಸೇರಿದ ಪ್ರದೇಶದಲ್ಲಿಯೇ ಕೊಳೆಗೇರಿ ಇರುವುದರಿಂದ ರಾಜ್ಯ ಸರ್ಕಾರ ಆ ಜಾಗವನ್ನು ಕೊಳೆಗೇರಿ ಎಂದು ಘೋಷಿಸುವ ಎಲ್ಲ ಅಧಿಕಾರ ಹೊಂದಿದೆ. ಹಾಗಾಗಿ ಬಿಕ್ಷುಕರ ಪುನರ್ವಸತಿ ಅತ್ಯಗತ್ಯ ಮತ್ತು ಆ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುವುದು ಸರಿಯಲ್ಲ ಎಂದಿತು.

ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ಮೈಸೂರು ಮಹಾರಾಜರ ಕಾಲದಲ್ಲಿ 1941ರಲ್ಲಿ ಯಶವಂತಪುರ ಹೋಬಳಿಗೆ ಸೇರಿದ ಪ್ರದೇಶದಲ್ಲಿ 311 ಎಕರೆ ಭೂಮಿಯನ್ನು ಭಿಕ್ಷುಕರ ಪುನರ್ವಸತಿಗಾಗಿ ಮಂಜೂರು ಮಾಡಿದೆ. ಆ ಪೈಕಿ 63 ಎಕರೆ ಜಾಗವನ್ನು ಭಿಕ್ಷುಕರ ಪುನರ್ವಸತಿಗೆ ಮೀಸಲಿಟ್ಟು, ಉಳಿದ ಜಾಗವನ್ನು ಸುಮ್ಮನಹಳ್ಳಿ ಕ್ಷಯರೋಗ ರೋಗಿಗಳಿನ ಪುನರ್ವಸತಿ ಕೇಂದ್ರಕ್ಕೆ ಗುತ್ತಿಗೆಯ ಮೇಲೆ ನೀಡಲಾಗಿತ್ತು. ಅದರಲ್ಲಿ 27 ಎಕರೆ ಜಾಗವನ್ನು ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿತ್ತು. ಹಾಗಾಗಿ ಜಿಲ್ಲಾಧಿಕಾರಿ ಭೂಮಿಯನ್ನು ಕೊಳೆಗೇರಿ ನಿವಾಸಿಗಳ ಪುನರ್ವಸತಿಗೆ ನಿಗದಿಪಡಿಸಿ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ABOUT THE AUTHOR

...view details