ಬೆಂಗಳೂರು: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಭೂಸ್ವಾಧೀನ ಮಾಡಿ ಡಿನೋಟಿಫೈ ಮಾಡುವ ಎಲ್ಲಾ ಆದೇಶಗಳು ಮತ್ತು ಡಿನೋಟಿಫಿಕೇಷನ್ಗಳನ್ನು ರದ್ದುಗೊಳಿಸುವ ಮುಂದಿನ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಕುರಿತು ಶೀಘ್ರವಾಗಿ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಗಮನಕ್ಕೆ ತಾರದೇ ಸರ್ಕಾರ ಡಿನೋಟಿಫಿಕೇಷನ್ ಮಾಡಿದ್ದ ಕ್ರಮವನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಎತ್ತಿ ಹಿಡಿದಿತ್ತು.
ಈ ಆದೇಶವನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ಈ ನಿರ್ದೇಶನ ನೀಡಿದೆ.
ಅಲ್ಲದೆ, ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಕುರಿತ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸೇರ್ಪಡೆ ಮಾಡಿರಬೇಕು ಎಂದು ಪೀಠ ಹೇಳಿದೆ. ಡಿನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳನ್ನೂ ಸಹ ಗೆಜೆಟ್ ಮಾಡಬೇಕು ಮತ್ತು ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪುವಂತೆ ಪ್ರಚಾರ ಮಾಡಬೇಕು. ಇದರಿಂದ ಭೂ ಮಾಲೀಕರು ಡಿನೋಟಿಫಿಕೇಷನ್ ಆಧಾರದ ಮೇಲೆ ಸಂಭಾವ್ಯ ಖರೀದಿದಾರರನ್ನು ವಂಚಿಸಲು ಸಾಧ್ಯವಿಲ್ಲ. ಡಿನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳ ಮರೆ ಮಾಚುವುದಕ್ಕೂ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಡಿನೋಟಿಫೈ ಮಾಡಲಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮುಗ್ಧ ಖರೀದಿದಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಆದರೆ, ನಂತರ ಅಂತಹ ಡಿನೋಟಿಫಿಕೇಷನ್ ರದ್ದುಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಬಿಡಿಎ ಗಮನಕ್ಕೆ ತಾರದೇ ಡಿನೋಟಿಫಿಕೇಷನ್ ಹೊರಡಿಸಿದ್ದರಿಂದ ಪ್ರಸ್ತುತ ಪ್ರಕರಣದಲ್ಲಿನ ಭೂಮಿಯನ್ನು ಸ್ವಾಧೀನದಿಂದ ಹೊರಗಿಡಬೇಕೇ ಎಂಬುದರ ಕುರಿತಂತೆ ಹೊಸದಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೆ, ಈ ಕುರಿತು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂ ಮಾಲೀಕರಾದ ಬಿಡಿಎ ಗಮನಕ್ಕೆ ತಾರದೇ ಡಿನೋಟಿಫಿಕೇಷನ್ ಹಿಂಪಡೆದಿರುವ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಚಲ್ಲಘಟ್ಟ ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಬಿಡಿಎ 2010ರ ಸೆಪ್ಟೆಂಬರ್ 29ರಂದು ಸ್ವಾಧೀನಪಡಿಸಿಕೊಂಡಿತ್ತು. ಉದ್ದೇಶಿತ ಭೂಮಿಯನ್ನು ಸರ್ಕಾರ ಬಿಡಿಎ ಗಮನಕ್ಕೆ ತಾರದೇ ಡಿನೋಟಿಫೈ ಮಾಡಲಾಗಿತ್ತು. 2010ರ ಅಕ್ಟೋಬರ್ 19ರಂದು ಡಿನೋಟಿಫಿಕೇಷನ್ ಆದೇಶವನ್ನು ಬಿಡಿಎ ವಿಚಾರಣೆ ನಡೆಸಿರಲಿಲ್ಲ. ಇದೇ ಕಾರಣದಿಂದ ಡಿನೋಟಿಫಿಕೇಷನ್ ಆದೇಶದ ಗೆಜೆಟ್ ಪ್ರಕಟಣೆ ಹೊರಡಿಸಿರಲಿಲ್ಲ. ಆದರೆ, ಉದ್ದೇಶಿತ ಜಮೀನನ್ನು ಭೂ ಮಾಲೀಕರು ಸ್ವಾಧೀನ ಪ್ರಕ್ರಿಯೆ ಮತ್ತು ಡಿನೋಟಿಫಿಕೇಷನ್ ಕುರಿತಂತೆ ಮಾಹಿತಿ ನೀಡದೆ ಭಾಗ್ಯಲಕ್ಷ್ಮಿ ಎಂಬವರಿಗೆ ಪರಾಭಾರೆ ಮಾಡಿದ್ದರು. ಈ ನಡುವೆ ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದ ಆದೇಶವನ್ನು ಬಿಡಿಎ ರದ್ದುಪಡಿಸಿತ್ತು.
ಬಿಡಿಎ ಕ್ರಮವನ್ನು ಪ್ರಶ್ನಿಸಿ ಭಾಗ್ಯಲಕ್ಷ್ಮಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯಪೀಠ, ಡಿನೋಟಿಫಿಕೇಷ್ ಆದೇಶವನ್ನು ಎತ್ತಿಹಿಡಿದಿದ್ದು, ಡಿನೋಟಿಫಿಕೇಷನ್ ಹಿಂಪಡೆದಿದ್ದ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ:ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐನಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ - Aravind kejriwal arrest