ಬೆಂಗಳೂರು : ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ಮಾರ್ಗದಲ್ಲಿ ಹೊಸಕೋಟೆ ತಾಲೂಕಿನ ಕೊಳತೂರು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಸ್ಥಳೀಯರು ಸಲ್ಲಿಸಿರುವ ಮನವಿಯನ್ನು ಮುಂದಿನ ಎಂಟು ವಾರಗಳಲ್ಲಿ ಪರಿಗಣಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐಎ)ಕ್ಕೆ ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ರೈತ ಕೆ. ವಿ ರವಿಕುಮಾರ್ ಸೇರಿದಂತೆ ಕೊಳತೂರು, ಅಪ್ಪಸಂದ್ರ, ಸೋಲೂರು, ಊರಹಳ್ಳಿ ಗ್ರಾಮಗಳ ಒಟ್ಟು 13 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ವಾದ ಮಂಡಿಸಿ, ಕಾರಿಡಾರ್ ನಿರ್ಮಾಣದಿಂದ ಗ್ರಾಮೀಣ ಭಾಗದ ನಿವಾಸಿಗಳು ಅನಪೇಕ್ಷಿತ ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕೊಳತೂರು ಗ್ರಾಮದ ಮುಖ್ಯ ರಸ್ತೆಯು ಕನಿಷ್ಠ 20 ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಗ್ರಾಮ ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ.
ಸಮೀಪದಲ್ಲೇ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಇದ್ದು, ಪ್ರತಿದಿನ ನೂರಾರು ಜನರು ಹೋಗುತ್ತಾರೆ. ಈ ಭಾಗದಲ್ಲಿ ಪ್ರತಿ ದಿನ ಸರಾಸರಿ ಒಂದು ಸಾವಿರ ವಾಹನಗಳ ಸಂಚಾರವಿದೆ. ಮುಖ್ಯವಾಗಿ ಶಾಲಾ ಮಕ್ಕಳು ಮತ್ತು ಹಾಲು ಸಾಗಣೆ ವಾಹನಗಳು, ಉಗ್ರಾಣಗಳಿಂದ ತರಕಾರಿ, ಹಣ್ಣು, ಇತ್ಯಾದಿ ದಿನಬಳಕೆ ಸಾಮಗ್ರಿಗಳ ಸರಬರಾಜು ನೇರವಾಗಿ ಬೆಂಗಳೂರು-ಕೋಲಾರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-75ಕ್ಕೆ ತಲುಪುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.