ಬೆಂಗಳೂರು :ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪದಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲಿದ್ದ ಯಾವುದೇ ಮರಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ಮಧ್ಯಂತರ ನಿರ್ದೇಶನದ ನಡುವೆಯೂ, ಮಾವಿನ ಮರಗಳು ಸೇರಿದಂತೆ ಒಟ್ಟು 1.30 ಲಕ್ಷ ಮರಗಳನ್ನು ತೆರವುಗೊಳಿಸಿದ್ದ ಅರಣ್ಯ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇದಕ್ಕೆ ಕಾರಣರಾದ ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದು ನಿರ್ದೇಶನ ನೀಡಿದೆ.
ಕೋಲಾರ ಜಿಲ್ಲೆ ಉಪ್ಪಾರಪಲ್ಲಿಯ ಗುಲ್ಜಾರ್ ಪಾಷ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ. ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಧಿಕಾರಿಗಳು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರರಿಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ನ್ಯಾಯಪೀಠ, ಮರಗಳನ್ನು ಯಾವ ಕಾರಣಕ್ಕೆ ತೆರವುಗೊಳಿಸಲಾಗಿದೆ. ಅರಣ್ಯ ಅಧಿಕಾರಿಗಳಿಗೆ ಮರಗಳನ್ನು ತೆರವುಗೊಳಿಸಲು ಅಧಿಕಾರವಿದೆಯೇ?. ಈ ಸಂಬಂಧ ಹೊರಡಿಸಿರುವ ಆದೇಶವನ್ನು ಹಾಜರು ಪಡಿಸಿ ಎಂದು ತಿಳಿಸಿತು. ಇದಕ್ಕೆ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು, ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾದರು.
ಇದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಅಡ್ವೋಕೇಟ್ ಜನರಲ್ ಸೇರಿದಂತೆ ಸರ್ಕಾರಿ ವಕೀಲರು ಸರ್ಕಾರಕ್ಕೆ ಸಲಹೆ ನೀಡಬೇಕು. ಅಡ್ವೋಕೇಟ್‌ಗಳು ನ್ಯಾಯಾಲಯಕ್ಕೆ ನೆರವಾಗುವಂತಿರಬೇಕು (ಅಮೈಕಾಸ್ ಕ್ಯೂರಿಯಾಗಿರಬೇಕು) ಕಾರ್ಯನಿರ್ವಹಿಸಬೇಕು. ಈ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶನದ ನಡುವೆಯೂ ಮರಗಳನ್ನು ಕಡಿಯಲಾಗಿದೆ. ಅದಕ್ಕೆ ಸಮರ್ಥನೆ ಮಾಡಿಕೊಂಡಿದ್ದಲ್ಲದೇ, ಅಧಿಕಾರಿಗಳ ಕ್ರಮವನ್ನು ನ್ಯಾಯಪೀಠಕ್ಕೆ ತೃಪ್ತಿಪಡಿಸುವುದಾಗಿ ಎಂದು ಹೇಳುತ್ತೀರಿ. ಇದು ಸರಿಯಾದ ಕ್ರಮವಲ್ಲ ಎಂದು ಪೀಠ ತಿಳಿಸಿತು.
ನಮ್ಮ(ಪೀಠ) ಕಳಕಳಿ ಇರುವುದು ಮರಗಳನ್ನು ತೆರವುಗೊಳಿಸಿರುವ ಬಗ್ಗೆ ಮಾತ್ರ. ಒಂದೇ ದಿನದಲ್ಲಿ ಬುಲ್ಡೋಜರ್‌ಗಳನ್ನು ತಂದು ಎಲ್ಲ ಮರಗಳನ್ನು ತೆರವುಗೊಳಿಸಿರುವುದರ ಹಿಂದಿನ ಕಾರಣವೇನು? ಎಂದು ಪೀಠ ಪ್ರಶ್ನಿಸಿತು. ಅಲ್ಲದೆ, ವಿಚಾರಣೆ ವೇಳೆ ಹಾಜರಿದ್ದ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಅವರನ್ನು ಉದ್ದೇಶಿಸಿದ ನ್ಯಾಯಪೀಠ, ಮರಗಳ ಕಡಿಯಲು ಇರುವ ಪ್ರಕ್ರಿಯೆ ಏನು?. ಯಾವ ಕಾರಣಕ್ಕಾಗಿ ಮರಗಳ ತೆರವು ಮಾಡಲಾಗಿದೆ ಎಂಬುದನ್ನು ಪ್ರಶ್ನಿಸಿತು. ಇದಕ್ಕೆ ಇರುವ ಆದೇಶವನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಿ ಎಂದು ತಿಳಿಸಿತು.