ಬೆಂಗಳೂರು:ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿ ಕೊಲೆ ಪ್ರಕರಣದ ಆರೋಪಿ ಮಹಂತೇಶ ಶಿರೂರ್ ಎಂಬಾತನಿಗೆ ಹೈಕೋರ್ಟ್ ಇಂದು ಜಾಮೀನು ನಿರಾಕರಿಸಿತು. ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್.ರಾಚಯ್ಯ ಆದೇಶಿಸಿದರು.
ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿ ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ ಎಷ್ಟು ದ್ವೇಷ ಬೆಳೆಸಿಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ. ಈ ಬೆಳವಣಿಗೆ ಗುರೂಜಿ ಹತ್ಯೆ ಪೂರ್ವಯೋಜಿತ ಎಂದು ತಿಳಿಯುತ್ತದೆ. ಅರ್ಜಿದಾರ ಮಾರಕಾಸ್ತ್ರಗಳೊಂದಿಗೆ ಗುರೂಜಿಯನ್ನು ಭೇಟಿ ಮಾಡಿ ಚಾಕುವಿನಿಂದ 56 ಬಾರಿ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾರೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿದ್ದಲ್ಲದೇ ದೊಡ್ಡ ಪ್ರಮಾಣದಲ್ಲಿ ಭಯವನ್ನೂ ಸೃಷ್ಟಿಸಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಗುರೂಜಿಯ ಕುಟುಂಬದ ಸದಸ್ಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ, ವೈಯಕ್ತಿಕ ಸ್ವಾತಂತ್ರ್ಯ ನಿರಂಕುಶವಾಗಿರುವುದಿಲ್ಲ. ಅದನ್ನು ನ್ಯಾಯಯುತವಾದ ಕಾರಣಗಳಿಂದ ನಿರ್ಬಂಧಿಸಬಹುದು. ವ್ಯಕ್ತಿ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದಾಗ ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು.