ಬೆಂಗಳೂರು: ಸಾಮಾಜಿಕ ಸಮಾನತೆಯ ಧ್ವನಿಯಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರ ಕವಿ ಕುವೆಂಪು ಅವರು ಆಂಗ್ಲ ಭಾಷೆಯ ಜೊತೆಗೆ ಮಾತೃ ಭಾಷೆ ಕಲಿಕೆ ಕಡ್ಡಾಯವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರಂತೆ ಮತೃಭಾಷೆ ಕಲಿಯಬೇಕು ಎನ್ನುವುದಕ್ಕೆ ನನ್ನ ಸಂಪೂರ್ಣ ಸಹಮತವಿರಲಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯ ತಿಳಿಸಿದ್ದಾರೆ.
ರಾಜ್ಯ ವಕೀಲರ ಪರಿಷತ್‌ನಿಂದ ಹೈಕೋರ್ಟ್‌ನ ಹಾಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಅವರು ಆಂಗ್ಲ ಭಾಷೆಯ ಜತೆ ಮಾತೃಭಾಷೆ ಕಡ್ಡಾಯಗೊಳಿಸಬೇಕು ಎಂದಿದ್ದರು. ಅದಕ್ಕೆ ನನ್ನ ಬೆಂಬಲವಿದೆ. ಗುಜರಾತಿ ನನಗೆ ಮಾತೃಭಾಷೆಯಾಗಿತ್ತು, ಕನ್ನಡ ನನ್ನ ಕರ್ಮ ಭಾಷೆಯಾಗಿದೆ ಎಂದರು. ಕರ್ನಾಟಕದೊಂದಿಗೆ ನನಗೆ ಹಲವು ರೀತಿಯಲ್ಲಿ ಸಂಬಂಧವಿದ್ದು, ಗುಜರಾತ್ ನ್ಯಾಯಾಲಯಲ್ಲಿ ವಕೀಲನಾಗಿ ಸೇವೆ ಪ್ರಾರಂಭಿಸಿದ ಸಂದರ್ಭದಲ್ಲಿ ನವೀನ್ ಚಂದ್ರ ಲಾ ಫೌಂಡೇಷನ್ ವತಿಯಿಂದ ಫೆಲೋಶಿಪ್ (ಶಿಷ್ಯವೇತನ) ಲಭ್ಯವಾಗಿತ್ತು.
ಈ ಫೆಲೋಶಿಪ್‌ನ್ನು ಸುಪ್ರೀಂಕೊರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕನ್ನಡಿಗ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು ಪ್ರದಾನ ಮಾಡಿದ್ದರು. ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸಂದರ್ಭದಲ್ಲಿ ಕೇಂದ್ರದಲ್ಲಿ ಕನ್ನಡಿಗರಾಗಿದ್ದ ಎಂ. ವೀರಪ್ಪ ಮೋಯ್ಲಿ ಅವರು ಕೇಂದ್ರ ನಾನೂನು ಸಚಿವರಾಗಿದ್ದರು. ಗುಜರಾತ್ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರೊಂದಿಗೆ ಮೊದಲ ಬಾರಿ ವಿಭಾಗೀಯ ಪೀಠ ಹಂಚಿಕೊಂಡಿದ್ದೆ ಎಂದು ವಿವರಿಸಿದರು.
ಗುಜರಾತ್ ಮತ್ತು ಕರ್ನಾಟಕ ರಾಜ್ಯಕ್ಕೆ ಅವಿನಾಭಾವ ಸಂಬಧವಿದ್ದು, ಕರ್ನಾಟಕ ಮೂಲದ ಚಾಲುಕ್ಯ ರಾಜ ಮನೆತನ ಗುಜರಾತ್‌ನಲ್ಲಿಯೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತ್ತು. ರಾಷ್ಟ್ರ ಕವಿ ಕುವೆಂಪು ಮತ್ತು ಗುಜರಾತ್ ರಾಜ್ಯದ ಉಮಾಶಂಕರ್ ಜೋಶಿ ಅವರು ಒಂದೇ ವರ್ಷ ಒಟ್ಟಾಗಿ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.