ಬೆಂಗಳೂರು: ರಣಜಿ ಕ್ರಿಕೆಟ್ ಕೆ.ಸಿ.ಕಾರಿಯಪ್ಪಗೆ ಪೊಲೀಸ್ ಕ್ಲಿಯರೆನ್ಸ್ ನೀಡಿದ ತಕ್ಷಣ ವೀಸಾ ಒದಗಿಸಿದ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ನಡೆಗೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದಾಗಿ ಪೊಲೀಸ್ ಕ್ಲಿಯರೆನ್ಸ್ ಹಾಗೂ ವೀಸಾ ದೊರೆಯದ ಕಾರಣ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅಡ್ಡಿ ಉಂಟಾದ ಹಿನ್ನೆಲೆ, ಪೊಲೀಸ್ ಕ್ಲಿಯರೆನ್ಸ್ ಕೋರಿ ಕೆ. ಸಿ ಕಾರಿಯಪ್ಪ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣ ಸಂಬಂಧ ಈ ಹಿಂದಿನ ವಿಚಾರಣೆ ವೇಳೆ ಪೊಲೀಸ್ ಕ್ಲಿಯರೆನ್ಸ್ ನೀಡಿದ 60 ನಿಮಿಷಗಳಲ್ಲಿ ವೀಸಾ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಭರವಸೆ ನೀಡಿದ್ದರು. ಇದೀಗ ಕೋರ್ಟ್ ಸೂಚನೆ ಮೇರೆಗೆ ನಗರದ ಪೊಲೀಸ್ ಇಲಾಖೆಯಿಂದ ಕ್ಲಿಯರೆನ್ಸ್ ದೊರಕಿದ 60 ನಿಮಿಷಗಳಲ್ಲೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಕಾರಿಯಪ್ಪಗೆ ವೀಸಾ ಒದಗಿಸಿಕೊಟ್ಟಿತು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.