ಕರ್ನಾಟಕ

karnataka

ETV Bharat / state

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ: ರೇವಣ್ಣ ಅರ್ಜಿ ತಿದ್ದುಪಡಿಗೆ ಹೈಕೋರ್ಟ್ ಅನುಮತಿ - H D REVANNA

ಪ್ರಜ್ವಲ್​ ರೇವಣ್ಣ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಸಂತ್ರಸ್ತೆಯ ಅಪಹರಣ ಸಂಬಂಧ ದಾಖಲಾದ ಎಫ್​ಐಆರ್​ ರದ್ದು ಕೋರಿ ಶಾಸಕ ಹೆಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ತಿದ್ದುಪಡಿಗೆ ಹೈಕೋರ್ಟ್ ಅನುಮತಿಸಿದೆ.

high court
ಹೆಚ್​.ಡಿ.ರೇವಣ್ಣ, ಹೈಕೋರ್ಟ್ (ETV Bharat)

By ETV Bharat Karnataka Team

Published : Oct 24, 2024, 3:20 PM IST

ಬೆಂಗಳೂರು:ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಿಸಿರುವ ಕುರಿತಂತೆ ಶಾಸಕ ಹೆಚ್​.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿದ್ದುಪಡಿ ಮಾಡುವುದಕ್ಕೆ ಇಂದು ಹೈಕೋರ್ಟ್ ಅನುಮತಿ ನೀಡಿದೆ.

ಹೆಚ್​.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು. ವಿಚಾರಣೆ ವೇಳೆ ರೇವಣ್ಣ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್​, ''ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿ ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕು'' ಎಂದು ಕೋರಿದರು.

ಇದಕ್ಕೆ ಒಪ್ಪಿದ ಪೀಠ, ಅರ್ಜಿ ತಿದ್ದುಪಡಿಗೆ ಬದಲಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಸಲಹೆ ನೀಡಿತು. ಇದಕ್ಕೆ ಸಿ.ವಿ.ನಾಗೇಶ್​, ''ಹೊಸದಾಗಿ ಅರ್ಜಿ ಸಲ್ಲಿಸಬೇಕಾದರೆ ಪ್ರಕ್ರಿಯೆ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಹೀಗಾಗಿ, ಅರ್ಜಿ ತಿದ್ದುಪಡಿಗೆ ಅವಕಾಶ ನೀಡಬೇಕು'' ಎಂದು ಕೋರಿದರು.

ಇದಕ್ಕೆ ಸರ್ಕಾರದ ಪರ ಹಾಜರಿದ್ದ ವಿಶೇಷ ಪಬ್ಲಿಕ್​ ಪ್ರಾಸಿಕ್ಯೂಟರ್​ ಪ್ರೊ.ರವಿವರ್ಮ ಕುಮಾರ್​, ''ಹೊಸದಾಗಿ ಅರ್ಜಿ ಸಲ್ಲಿಸಿದರೆ ಮತ್ತೆ ಹೊಸದಾಗಿ ಆಕ್ಷೇಪಣೆಯನ್ನೂ ಸಲ್ಲಿಸಬೇಕಾಗುತ್ತದೆ. ಹೀಗಾಗಿ, ಅರ್ಜಿ ತಿದ್ದುಪಡಿ ಮಾಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಅಲ್ಲದೆ, ತಿದ್ದುಪಡಿ ಅರ್ಜಿಗೂ ಆಕ್ಷೇಪಣೆ ಸಲ್ಲಿಸಲಾಗುವುದು'' ಎಂದು ತಿಳಿಸಿದರು.

ವಾದ ಆಲಿಸಿದ ನ್ಯಾಯಪೀಠ, ಮುಂದಿನ 10 ದಿನಗಳಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡುವುದಕ್ಕೆ ಅವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿತು.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಜಾಮೀನು ರದ್ದು ಕೋರಿ ಇ.ಡಿ ಅರ್ಜಿ, ಬಿ.ನಾಗೇಂದ್ರಗೆ ಹೈಕೋರ್ಟ್ ತುರ್ತು ನೋಟಿಸ್​

ABOUT THE AUTHOR

...view details