ಬೆಂಗಳೂರು:ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಕೋಲಾರ ಅಥವಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಾರ್ಮಾಸ್ಯುಟಿಕಲ್ಸ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದೆ.
ಖನಿಜ ಭವನದಲ್ಲಿ ಬುಧವಾರ ನಡೆದ ಇಂಡಸ್ಟ್ರಿ 5.0 ಮತ್ತು ಫಾರ್ಮಾಸುಟಿಕಲ್ಸ್ ವಿಷನ್ ಗ್ರೂಪ್ಗಳ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ವಿವಿಧ ಔಷಧ ತಯಾರಿಕೆ ಕಂಪನಿಗಳ ಪ್ರಮುಖರೊಂದಿಗೆ ಮಾತನಾಡಿದರು. ಸಚಿವರ ಈ ಘೋಷಣೆಯನ್ನು ಉದ್ಯಮಿಗಳು ಸ್ವಾಗತಿಸಿದ್ದಾರೆ. ಇದಕ್ಕೆ ಔಷಧ ತಯಾರಿಕಾ ಕ್ಷೇತ್ರದಲ್ಲಿರುವ ಪರಿಣಿತ ಉದ್ಯಮಿಗಳು ಮತ್ತು ವಿಜ್ಞಾನಿಗಳ ಸಲಹೆಗಳನ್ನು ಪಡೆಯಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹತ್ತು ಕ್ಷೇತ್ರಗಳನ್ನು ಆಕರ್ಷಣೀಯವೆಂದು ಗುರುತಿಸಿದ್ದು, ಇವುಗಳಲ್ಲಿ ಫಾರ್ಮಾಸುಟಿಕಲ್ಸ್ ಕೂಡ ಒಂದಾಗಿದೆ. ಈ ಕ್ಷೇತ್ರವು ವರ್ಷಕ್ಕೆ ಶೇ.11ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ಆರು ವರ್ಷಗಳಲ್ಲಿ ಇದರ ವಾರ್ಷಿಕ ವಹಿವಾಟು 130 ಬಿಲಿಯನ್ ಡಾಲರ್ ಮುಟ್ಟಲಿದೆ. ಕೈಗೆಟುಕುವಂತಹ ಔಷಧಿಗಳು, ಲಸಿಕೆಗಳು ಮತ್ತು ಔಷಧೋತ್ಪನ್ನಗಳ ಗರಿಷ್ಠ ರಫ್ತು ವಹಿವಾಟು ಇದಕ್ಕೆ ಕಾರಣಗಳಾಗಿವೆ ಎಂದು ಅವರು ತಿಳಿಸಿದರು.
ಔಷಧ ಕ್ಷೇತ್ರದಿಂದ ಬರುತ್ತಿರುವ ವರಮಾನದಲ್ಲಿ ರಾಜ್ಯದ ಕೊಡುಗೆ ಶೇ.11ರಷ್ಟಿದೆ. ಜೊತೆಗೆ ಬಯೋಟೆಕ್ ವಲಯದ ಆದಾಯ ಮತ್ತು ನಿರ್ಯಾತದಲ್ಲಿ ನಮ್ಮ ಕೊಡುಗೆ ಶೇ.60ರಷ್ಟಿದೆ. ಬೇರೆ ಯಾವ ರಾಜ್ಯಗಳೂ ಈ ವಿಷಯದಲ್ಲಿ ನಮ್ಮ ಸನಿಹದಲ್ಲೂ ಇಲ್ಲ. ಈ ಸಾಧನೆಯನ್ನು ಇನ್ನಷ್ಟು ವ್ಯಾಪಕಗೊಳಿಸಿ, ಬಂಡವಾಳವನ್ನು ಆಕರ್ಷಿಸಲಾಗುವುದು ಎಂದು ಸಚಿವರು ಹೇಳಿದರು.