ಮೈಸೂರು: ದಸರಾ ಕುಸ್ತಿ ರಾಜ್ಯ ಪಾರಂಪರೆಯ ಪ್ರತೀಕವಾಗಿ ಇಂದಿಗೂ ನಡೆಯುತ್ತಿದೆ. ದಸರಾದ ಕುಸ್ತಿಗೆ ರಾಷ್ಟ್ರಮಟ್ಟದಿಂದ ಕುಸ್ತಿಪಟುಗಳು ಆಗಮಿಸುತ್ತಾರೆ. ದಸರಾ ಕುಸ್ತಿ ಹೇಗೆ ನಡೆಯುತ್ತದೆ? ಕುಸ್ತಿಪಟುಗಳು ಹೇಗೆ ಸಿದ್ಧರಾಗುತ್ತಾರೆ. ಕುಸ್ತಿಯಲ್ಲಿ ಎಷ್ಟು ವಿಧ? ಮೈಸೂರು ನಗರದಲ್ಲಿ ಇಂದಿಗೂ ಗರಡಿ ಮನೆಗಳಲ್ಲಿ ಕುಸ್ತಿಪಟುಗಳು ಹೇಗೆ ತಯಾರಾಗುತ್ತಾರೆ? ದಸರಾ ಕುಸ್ತಿಗೆ ಕುಸಿಪಟುಗಳ ಆಹಾರ ಹೇಗಿರುತ್ತದೆ? ಯಾವ ರೀತಿ ಶಿಸ್ತುಬದ್ಧ ಆಹಾರ ಸೇವಿಸಬೇಕು ಹಾಗೂ ಮೈಸೂರು ದಸರಾ ಕುಸ್ತಿಯ ಪ್ರಾಮುಖ್ಯತೆ ಏನು? ಇಲ್ಲಿದೆ ಮಾಹಿತಿ.
ಮೈಸೂರು ದಸರಾ ಕುಸ್ತಿಗೆ ರಾಜವಂಶಸ್ಥರ ಕೊಡುಗೆ ಅಪಾರ. ಮೈಸೂರು ನಗರದಲ್ಲಿ ಇಂದಿಗೂ ಕುಸ್ತಿ ಉಳಿವಿಗೆ ರಾಜರ ಕೊಡುಗೆ ಅಮೋಘ. ಅವರ ಪ್ರೋತ್ಸಾಹದಿಂದ ಮೈಸೂರು ನಗರದಲ್ಲಿ ಇಂದಿಗೂ ಸಹ ಕುಸ್ತಿ ಮನೆಗಳು ಇದ್ದು, ಪ್ರತಿ ನಿತ್ಯ ಕುಸ್ತಿಪಟುಗಳು ಗರಡಿ ಮನೆಯಲ್ಲಿ ಗುರುಗಳ ಮಾರ್ಗದರ್ಶನದಂತೆ ಕಠಿಣ ಅಭ್ಯಾಸ ನಡೆಸಿ ದಸರಾ ಕುಸ್ತಿಗೆ ತಯಾರಾಗುತ್ತಾರೆ. ಈ ಬಗ್ಗೆ ಮೈಸೂರು ಕುಸ್ತಿ ಸಂಘದ ಅಧ್ಯಕ್ಷ ಪೈಲ್ವಾನ್ ಚಂದ್ರಶೇಖರ್ ಇಟ್ಟಿಗೆಗೂಡು ದಸರಾ ಕುಸ್ತಿಯ ಬಗ್ಗೆ ಅದರ ಮಹತ್ವದ ಬಗ್ಗೆ ವಿವರಿಸಿದ್ದಾರೆ.
ಮೈಸೂರು ಅರಮನೆಯಂತೆಯೇ ಇಲ್ಲಿನ ಕುಸ್ತಿಯೂ ಪ್ರಖ್ಯಾತಿ:"ಮೈಸೂರಿನ ಅರಮನೆ ವಿಶ್ವದಲ್ಲೇ ಪ್ರಖ್ಯಾತಿ ಪಡೆದುಕೊಂಡಿದೆ. ಹಾಗೆಯೇ ಇಲ್ಲಿನ ದಸರಾ ಮಹೋತ್ಸವ ಕೂಡ ತನ್ನದೇ ಆದ ಇತಿಹಾಸ ಹೊಂದಿದೆ. ಇಡೀ ಪ್ರಪಂಚಕ್ಕೆ ಕುಸ್ತಿಯ ಕಲೆಯನ್ನು ತೋರಿಸಿಕೊಟ್ಟಿದ್ದು, ಮೈಸೂರಿನ ನಾಲ್ವಡಿ ಮಹಾರಾಜರು. ಅವರು ಹಿಂದೆ ತೋರಿಸಿಕೊಟ್ಟ ದಾರಿಯಲ್ಲಿ ಇಂದಿಗೂ ಕೂಡ ಕುಸ್ತಿ ಮೈಸೂರಿನಲ್ಲಿ ನಡೆದುಕೊಂಡು ಬರುತ್ತಿದೆ. ದಸರಾ ಮಹೋತ್ಸವದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗೆ ಇಡೀ ಕರ್ನಾಟಕದಲ್ಲಿರುವ ಪೈಲ್ವಾನ್ಗಳು ಭಾಗವಹಿಸುತ್ತಾರೆ. ಇದಕ್ಕಾಗಿ ವರ್ಷವಿಡೀ ತಯಾರಿ ನಡೆಸುತ್ತಾರೆ. ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ನೀಡುವ ಮೈಸೂರು ಕಂಠೀರವ, ಕೇಸರಿ, ಕುಮಾರ ಬಿರುದು ತೆಗೆದುಕೊಂಡರೆ ಇಡೀ ಭಾರತದಲ್ಲಿ ಹೆಚ್ಚಿನ ಗೌರವ ಇದೆ. ಸರ್ಕಾರ ನೀಡುವ ಬೆಳ್ಳಿ ಗದೆಗೆ ಮೈಸೂರಿನ ಮಹಾರಾಜರ ಇತಿಹಾಸ ಕೂಡ ಇದೆ. ಇದಕ್ಕಾಗಿ ಮೈಸೂರಿನ ಕುಸ್ತಿ ಪಂದ್ಯಾಳಿಯು ಅರಮನೆಯಷ್ಟೇ ಪ್ರಖ್ಯಾತಿ ಪಡೆದುಕೊಂಡಿದೆ" ಎನ್ನುತ್ತಾರೆ ಚಂದ್ರಶೇಖರ್ ಇಟ್ಟಿಗೆಗೂಡು.
ಮೈಸುರಿನ ಕುಸ್ತಿಯಲ್ಲಿ ವಿವಿಧ ವಿಧಗಳು: "ಮೈಸೂರಿನ ದಸರಾ ನಡೆಯುವ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಮ್ಯಾಟ್ ಕುಸ್ತಿ, ಪಾಯಿಂಟ್ ಕುಸ್ತಿ, ನಾಡ ಕುಸ್ತಿ (ಮಣ್ಣಿನ ಕುಸ್ತಿ) ಎಂಬ ವಿಭಾಗಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತದೆ. ವಿಶೇಷವಾಗಿ ನಾಡ ಕುಸ್ತಿ ಪಂದ್ಯವಾಳಿ ನಡೆಯುವಾಗ ಅರಿಶಿಣ, ಕುಂಕುಮ, ಪಚ್ಚ ಕರ್ಪೂರ ಮತ್ತು ಎಣ್ಣೆಯನ್ನು ಮಣ್ಣಿನಲ್ಲಿ ಬೆರೆಸಲಾಗುತ್ತದೆ. ಈ ಸಮಯದಲ್ಲಿ ಕುಸ್ತಿಪಟುವಿನ ದೇಹಕ್ಕೆ ಹೆಚ್ಚಿನ ಆರೋಗ್ಯ ಒದಗಿಸುತ್ತದೆ" ಎಂದರು.
ದಸರಾ ಕುಸ್ತಿಗಾಗಿ ವರ್ಷಗಟ್ಟಲೆ ಅಭ್ಯಾಸ: "ಮೈಸೂರಲ್ಲಿ ನಡೆಯುವ ದಸರಾ ಪಂದ್ಯಾವಳಿಗೆ ಇಡೀ ಕರ್ನಾಟಕದಲ್ಲಿರುವ ಪೈಲ್ವಾನ್ಗಳು ವರ್ಷಗಟ್ಟಲೆ ತಮ್ಮ ಗರಡಿಗಳಲ್ಲಿ ಅಭ್ಯಾಸ ನಡೆಸುತ್ತಾರೆ. ಈ ಹಿಂದೆ ಕುಸ್ತಿ ಪಂದ್ಯಾವಳಿಯಲ್ಲಿ ನೀಡುವ ಗದೆ ಹೂರಗಿನವರಿಗೆ ಹೋಗುತ್ತಿತು. ಈ ಹಿನ್ನೆಲೆ ಮೈಸೂರು ಕುಮಾರ ಪ್ರಶಸ್ತಿಯನ್ನು ಮೈಸೂರು ಮಂಡ್ಯ ಚಾಮರಾಜನಗರಕ್ಕೆ ಸೀಮಿತ ಮಾಡಲಾಗಿದೆ. ಹೀಗಾಗಿ ವರ್ಷವಿಡೀ ಗರಡಿ ಮನೆಗಳಲ್ಲಿ ಅಭ್ಯಾಸ ನಡೆಸಲಾಗುತ್ತದೆ. ಮೈಸೂರಿನಲ್ಲಿ ಒಟ್ಟು 70 ಗರಡಿ ಮನೆಗಳು ಇವೆ. ದಸರಾ ಹತ್ತಿರ ಬರುತ್ತಿದ್ದಂತೆ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸುವ ಮೂಲಕ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.