ಮಲೆನಾಡು ಭಾಗಕ್ಕೆ ಪ್ರವೇಶಿಸಿದ ಕಾಡಾನೆಗಳ ಹಿಂಡು ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕಾಡಾನೆಗಳ ದಾಳಿಗೆ ಈಗಾಗಲೇ ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ಹೀಗಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈಗ ಮತ್ತೆ ಅದೇ ತಲೆನೋವು ರೈತರಿಗೆ ಶುರುವಾಗಿದೆ. ಬೇಲೂರಿನ ಬಿಕ್ಕೊಡಿನ ಬೀಟಮ್ಮ ಖ್ಯಾತಿಯ ಕಾಡಾನೆ 30ಕ್ಕೂ ಹೆಚ್ಚು ಸಂಖ್ಯೆಯ ಆನೆಗಳ ಜೊತೆ ಸೇರಿ ಚಿಕ್ಕಮಗಳೂರು ಹೊರವಲಯದ ಕೆ. ಆರ್ ಪೇಟೆ ಸುತ್ತಮುತ್ತ ದಾಂಗುಡಿ ಇಟ್ಟಿದೆ.
ಬೇಲೂರಿನ ಬೀಟಮ್ಮ ಟೀಂ ಇದೀಗ ಚಿಕ್ಕಮಗಳೂರಿನಲ್ಲಿ ಪ್ರತ್ಯಕ್ಷವಾಗಿದೆ. ನಗರದ ಹೊರ ವಲಯದ ಕೆ ಆರ್ ಪೇಟೆ ಮಾವಿನ ಕೆರೆ ಬಳಿ ಭಾನುವಾರ ಈ ಆನೆಗಳು ಕಾಣಿಸಿಕೊಂಡಿವೆ. ಹೀಗಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕೆಂದು ಅರಣ್ಯ ಇಲಾಖೆಯಿಂದ ಅಕ್ಕಪಕ್ಕದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಗ್ರಾಮದ ಸುತ್ತಮುತ್ತ ಬೀಟಮ್ಮನ ಬೃಹತ್ ಗುಂಪಿನ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಬೇಲೂರು ಮಾರ್ಗವಾಗಿ ಜಿಲ್ಲೆಗೆ ಆಗಮಿಸಿರಬಹುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯ ಕೆಲ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಜನವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ.
ಕಾಡಾನೆಗಳ ಹಿಂಡು ತೋಟ, ಭತ್ತದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಅಲ್ಲದೇ ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡಿವೆ. ಬೀಟಮ್ಮ ತಂಡದ ಕಾಡಾನೆಗಳ ಹಿಂಡನ್ನು ಆದಷ್ಟು ಬೇಗ ಕಾಡಿಗೆ ಅಟ್ಟಬೇಕೆಂದು ಜನರು ಅರಣ್ಯ ಇಲಾಖೆಗೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಆನೆಗಳು ಇಲ್ಲೇ ಬೀಡುಬಿಟ್ಟಿವೆ. ಈ ಹಿಂದೆ ಬೇಲೂರಲ್ಲಿ ಮರದ ಮೇಲೆ ಕುಳಿತ ವ್ಯಕ್ತಿಯನ್ನ ಸೊಂಡಿಲಿನಿಂದ ಎಳೆದು ಎಸೆದ ನಂತರವೂ ಕೆ. ಆರ್ ಪೇಟೆಯಲ್ಲೂ ಜನ ಆನೆ ಹಿಂಡು ನೋಡಲು ಮರವೇರಿ ಕುಳಿತು ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ.
ಬೆಳೆಗಳನ್ನು ಕಳೆದುಕೊಂಡ ರೈತರು ಕಂಗಾಲು : ಈಗಾಗಲೇ ಮೂಡಿಗೆರೆ ಭಾಗದ ಹತ್ತಾರು ಹಳ್ಳಿಗಳಲ್ಲಿ ಅಡಿಕೆ, ಬಾಳೆ, ತೆಂಗು, ಕಾಫಿ ಬೆಳೆಗಳನ್ನು ಕಾಡಾನೆಗಳ ಹಿಂಡು ನಾಶ ಮಾಡಿವೆ. ಬೆಳೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಇತ್ತ ಪರಿಹಾರವೂ ಸಿಗದೆ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ. ಈಗ ಮತ್ತೆ ಕಾಡಾನೆಗಳ ದಂಡು ಆಗಮಿಸಿರುವುದಕ್ಕೆ ಈ ಭಾಗದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಕೂಡಲೇ ಮಲೆನಾಡಿನ ಪ್ರದೇಶವನ್ನು ಪ್ರವೇಶಿಸಿರುವ ಕಾಡಾನೆ ಹಿಂಡಅನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ನಾಡಿನತ್ತ ಕಾಡಾನೆಗಳ ಸವಾರಿ: ಚಾಮರಾಜನಗರ ಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ