ಬೆಂಗಳೂರು:ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿವೆ. ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಅಡಚಣೆಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬೆಸ್ಕಾಂ ತನ್ನ ಗ್ರಾಹಕರಿಗೆ ಪರ್ಯಾಯ ವಾಟ್ಸಾಪ್/ಎಸ್‌ಎಂಎಸ್ ದೂರವಾಣಿ ಸಂಖ್ಯೆ ನೀಡಿದೆ.
ಬೆಸ್ಕಾಂ ಸಹಾಯವಾಣಿ 1912ಗೆ ಹೆಚ್ಚಿನ ಕಾಲ್ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ದೂರು ಆಲಿಸಲು ಸಾಧ್ಯವಾಗುತ್ತಿಲ್ಲ. ಜನರಿಗೂ ವಿದ್ಯುತ್ ಸಮಸ್ಯೆ ಕುರಿತು ಮಾಹಿತಿ ನೀಡಲು, ದೂರು ನೀಡಲು ಸಹಾಯವಾಣಿ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಕಾಲ್ ವೇಟಿಂಗ್, ಬ್ಯುಸಿ ಹಿನ್ನೆಲೆ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಬೆಸ್ಕಾಂ ತಾತ್ಕಾಲಿಕವಾಗಿ ಪರ್ಯಾಯ ದೂರವಾಣಿ ಸಂಖ್ಯೆಗಳನ್ನು ನೀಡಿದೆ.
ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪಯಾರ್ಯ ವಾಟ್ಸಾಪ್ ಸಂಖ್ಯೆಗಳನ್ನು ನೀಡಲಾಗಿದೆ. ವಾಟ್ಸಾಪ್ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಾಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಜೊತೆಗೆ ಎಸ್ಎಂಎಸ್ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.