ಬೆಳಗಾವಿಯಲ್ಲಿ ಹೆಬ್ಬಾಳ್ಕರ್-ಜಾರಕಿಹೊಳಿ ಭರ್ಜರಿ ಮತಬೇಟೆ ಬೆಳಗಾವಿ: ಬೆಳಗಾವಿ ಮೃಣಾಲ್ ಹೆಬ್ಬಾಳ್ಕರ್ ಮತ್ತು ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ಬಹುತೇಕ ಫೈನಲ್ ಆಗಿರುವ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಮೃಣಾಲ್ ಪರ ತಾಯಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕಾ ಪರ ಸಹೋದರ ರಾಹುಲ್ ಜಾರಕಿಹೊಳಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಹೌದು, ಕಾಂಗ್ರೆಸ್ ಟಿಕೆಟ್ ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ. ಆದರೂ ಇಬ್ಬರು ಸಚಿವರ ಮಕ್ಕಳಿಗೆ ಬಹುತೇಕ ಫೈನಲ್ ಆಗಿದ್ದರಿಂದ ಪ್ರಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದ್ದರಿಂದ ಬುಧವಾರ ಮಧ್ಯಾಹ್ನ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮಗನ ಪರ ಪ್ರಚಾರ ನಡೆಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಜೆ ಬೈಲಹೊಂಗಲದಲ್ಲಿ ಮತಬೇಟೆ ನಡೆಸಿದರು. ಈ ವೇಳೆ, ಸಚಿವ ಸತೀಶ ಜಾರಕಿಹೊಳಿ, ಶಾಸಕ ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಮೃಣಾಲ್ಗೆ ಸಾಥ್ ಕೊಟ್ಟರು.
ಪ್ರಚಾರಕ್ಕೆ ಧುಮುಕಿದ ಕೈ ನಾಯಕರು ಈ ವೇಳೆ ಭಾಷಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ ಕಳೆದ 10 ವರ್ಷದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಕ್ಷೇತ್ರದ ಮನೆ ಮನೆಗೆ ಪರಿಚಿತನಾಗಿದ್ದಾನೆ. ಜಿಲ್ಲೆಯ ಎಲ್ಲ ಮುಖಂಡರ ಪ್ರಯತ್ನದಿಂದಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಉತ್ತಮವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆ ಕೂಡ ನಮಗೆಲ್ಲ ಶಕ್ತಿ ತುಂಬಿದೆ. ಬರುವ ಚುನಾವಣೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿ ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡೋಣ ಎಂದರು.
ಇನ್ನು ಪ್ರಿಯಾಂಕಾ ಜಾರಕಿಹೊಳಿ ಕೂಡ ಸಹೋದರ ರಾಹುಲ್ ಮತ್ತು ತಂದೆ ಜೊತೆಗೆ ಯಮಕನಮರಡಿ ಕ್ಷೇತ್ರದ ದೇವಗಿರಿ ಗ್ರಾಮದಿಂದಲೇ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಅಸ್ತ್ರ ಪ್ರಯೋಗಿಸುತ್ತಿರುವ ಪ್ರಿಯಾಂಕಾ ತಂದೆ ಸತೀಶ್ ಜಾರಕಿಹೊಳಿ, ಅಭಿವೃದ್ಧಿ ಕಾರ್ಯಗಳನ್ನ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ.
ಈ ವೇಳೆ,ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಿಯಾಂಕಾ, ಟಿಕೆಟ್ ಇನ್ನು ಘೋಷಣೆ ಆಗಿಲ್ಲ, ಇನ್ನು ಎರಡ್ಮೂರು ದಿನಗಳಲ್ಲಿ ಆಗಬಹುದು, ಚುನಾವಣೆ ಸಿದ್ಧತೆ ಚೆನ್ನಾಗಿದೆ, ಪಕ್ಷದ ನಾಯಕರು ಹಾಗೂ ಮುಖಂಡರು ಬೆಂಬಲಿಸುತ್ತಿದ್ದಾರೆ, ಎರಡು ದಿನಗಳಿಂದ ಕಡೋಲಿ, ಕಾಕತಿ, ಹುದಲಿ ಪಂಚಾಯಿತಿ ಎಲ್ಲಾ ಮುಗಿದಿದೆ, ನಾವು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳಿಂದ ಯುವಕರು ಕೂಡಾ ಬೆಂಬಲಿಸುತ್ತಿದ್ದಾರೆ, ಹಾಗಾಗಿ ದೇಶಕ್ಕಾಗಿ ಏನಾದರೂ ನಾವು ಕೊಡುಗೆ ಕೊಡಬೇಕು ಅಲ್ವಾ? ತಂದೆಯವರ ಸಹಕಾರ ನಮ್ಮ ಮೇಲಿದೆ, ಹಾಗೇ ತಂದೆಯವರು ಟಿಕೆಟ್ ಘೋಷಣೆ ಆದ ಮೇಲೆ ನಮ್ಮ ಜೊತೆ ಬರುತ್ತಾರೆ, ಇವಾಗ ಕೂಡ ಜಾಸ್ತಿ ಜನರು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಬಿಜೆಪಿಯವರು ರಾಮಮಂದಿರ ಇಟ್ಟುಕೊಂಡು ಚುನಾವಣೆಗೆ ಬಂದಿದ್ದು, ನೀವೇನು ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಾವು ಗ್ಯಾರಂಟಿ ಹಾಗೂ ಅಭಿವೃದ್ಧಿ ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ಈ ಬಾರಿ ಯುವ ನಾಯಕರಿಗೆ ಮಣೆ ಹಾಕುವ ಕೆಲಸ ಮಾಡುತ್ತೇವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ರಾಹುಲ್ ಜಾರಕಿಹೊಳಿ ಮಾತನಾಡಿ, ಸಹೋದರಿ ಗೆಲ್ಲಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಪಕ್ಷದವರು ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೂ ಸಹೋದರಿ ಪ್ರಿಯಾಂಕಾ ಅವರ ಹೆಸರು ಮುಂಚಣಿಯಲ್ಲಿದೆ. ತಂದೆ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪ್ರಚಾರ ಪ್ರಾರಂಭಿಸಿದ್ದೇವೆ. ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಬೇರೆ ಮತಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡುತ್ತೇವೆ. ಚಿಕ್ಕೋಡಿ ಬಹಳ ದೊಡ್ಡ ಕ್ಷೇತ್ರ ಎಲ್ಲ ಗ್ರಾಮಗಳಿಗೆ ಹೋಗಲು ಆಗೋದಿಲ್ಲ. ಆದರೆ, ಗ್ರಾಮ ಪಂಚಾಯಿತಿವರೆಗೂ ಭೇಟಿ ಮಾಡುತ್ತೇವೆ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಆದರೂ ಹೋಗುತ್ತೇವೆ. ಜನರು ಬದಲಾವಣೆ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದರು.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಇರುವ ನಡುವೆ ಕಾಂಗ್ರೆಸ್ ಭರ್ಜರಿ ಪ್ರಚಾರ ಆರಂಭಿಸಿದ್ದು, ಖುದ್ದು ಇಬ್ಬರು ಸಚಿವರೇ ಅಖಾಡಕ್ಕೆ ಇಳಿದಿರೋದು ಚುನಾವಣಾ ಕಣ ರಂಗೇರಿಸಿದೆ.
ಇದನ್ನೂ ಓದಿ: ಭವಿಷ್ಯದ ಚುನಾವಣೆಗಳಲ್ಲಿ ಶಾಯಿ ಬದಲಾಗಿ ಮಾರ್ಕರ್ ಪೆನ್ ಬಳಕೆ ಸಾಧ್ಯತೆ: ಮೊಹಮ್ಮದ್ ಇರ್ಫಾನ್ - Mohammad Irfan