ಚಿಕ್ಕಬಳ್ಳಾಪುರ: ಜಿಲ್ಲಾಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರು ಪಾಲಾಗಿವೆ.
ಭಾರೀ ಮಳೆಯಿಂದಾಗಿ ಚಿಂತಾಮಣಿ ತಾಲೂಕಿನ ಹಲವಡೆ ಅವಾಂತರಗಳು ಸೃಷ್ಟಿಯಾಗಿವೆ. ನಗರದಲ್ಲಿ ಮನೆಗಳಿಗೂ ನೀರು ನುಗ್ಗಿದೆ. ನಗರದ ರೇಷ್ಮೆ ಮಾರುಕಟ್ಟೆ ಜಲಾವೃತಗೊಂಡಿದ್ದು, 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿವೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರದ ಜಕ್ಕಲಮಡುಗು ಜಲಾಶಯ, ಗುಂಡಿಬಂಡೆ ಕೆರೆ ಕೋಡಿ ಬಿದ್ದಿವೆ.