ಚಿಕ್ಕಮಗಳೂರು:ಕೆಲವು ದಿನಗಳಿಂದಮಲೆನಾಡಿನ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಕಾಫಿ ನಾಡು ಚಿಕ್ಕಮಗಳೂರಲ್ಲಿ ಇಂದೂ ಕೂಡಾ ಧಾರಾಕಾರ ಮಳೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ, ಬಸರೀಕಟ್ಟೆ, ಬೆತ್ತದ ಕೊಳಲು ಮತ್ತು ಸೀಗೋಡು ಗ್ರಾಮಗಳಲ್ಲಿ ಗುಡುಗು, ಮಿಂಚಿನೊಂದಿಗೆ ಉತ್ತಮ ಮಳೆಯಾಗಿದೆ. ಕಾಫಿ ಹೂ ಬಿಡುವ ಸಮಯಕ್ಕೆ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.
ಮಳೆಯ ಅಭಾವದಿಂದ ಮಲೆನಾಡಿನ ಕೆಲವು ಭಾಗಗಳಲ್ಲಿ ಕುಡಿಯು ನೀರಿಗೂ ಹಾಹಾಕಾರ ಉಂಟಾಗಿತ್ತು. ತಾಪಮಾನ ಹೆಚ್ಚಳದಿಂದ ಜಿಲ್ಲೆಯ ಚಂದ್ರದ್ರೋಣ ಪರ್ವತಗಳಲ್ಲಿ ಆಗಾಗ ಕಾಳ್ಗಿಚ್ಚು ಸಂಭವಿಸುತ್ತಿದ್ದವು. ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಕಂಗೆಟ್ಟಿದ್ದರು. ಸದ್ಯ ವರುಣನ ಕೃಪೆಯಿಂದ ನಿಟ್ಟುಸಿರುವ ಬಿಡುವಂತಾಗಿದೆ.
12 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ(ಬೆಂಗಳೂರು):ಮತ್ತೊಂದೆಡೆ, ರಾಜ್ಯದ 12 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇತ್ತೀಚಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮುಖ್ಯವಾಗಿ ಮಾ. 20 ರಿಂದ 24ರ ವರೆಗೆ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.