ಬೆಂಗಳೂರು :ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ರಾಜ್ಯದ ಖಾಸಗಿ ಶಾಲೆಗಳಿಗೂ ಅನ್ವಯಿಸಲಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠಕ್ಕೆ ಸರ್ಕಾರ ಈ ಸ್ಪಷ್ಟನೆ ನೀಡಿದೆ.
ಸರ್ಕಾರದ ಸ್ಪಷ್ಟೀಕರಣ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾಡಗೀತೆಯನ್ನು ನಿರ್ದಿಷ್ಟ ರಾಗದಲ್ಲಿ ಹಾಡುವುದನ್ನು ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಯಾವುದೇ ಶಾಸನವಿಲ್ಲ ಎಂಬುದಾಗಿ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಹಾಗಾದರೆ, ಇಂತಹ ಆದೇಶ ಹೊರಡಿಸಲು ಸರ್ಕಾರ ಯಾವ ಶಾಸನಾತ್ಮಕ ಅಧಿಕಾರ ಹೊಂದಿದೆ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಈ ಕುರಿತು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೈಕೋರ್ಟ್ ಸೂಚನೆ:ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಹೈಕೋರ್ಟ್, ನಾಡಗೀತೆ ಸಾಂವಿಧಾನಿಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಾಡಗೀತೆ ವಿಚಾರದಲ್ಲಿ ರಾಜ್ಯ ಸರ್ಕಾರವು ಏಕೆ ಹೀಗೆ ಗೊಂದಲ ಆದೇಶಗಳನ್ನು ಹೊರಡಿಸುತ್ತಿದೆ? ಒಂದು ಆದೇಶ ಹೊರಡಿಸಿ ನಂತರ ಅದನ್ನು ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸುತ್ತಿದೆ. ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನದ ಅಥವಾ ಇತರ ಶಾಸನದ ಬೆಂಬಲವಿರಬೇಕು. ಸರ್ಕಾರ ವಿವೇಚನಾಧಿಕಾರ ಬಳಸಿ ಕಾರ್ಯಕಾರಿ ಆದೇಶ ಹೊರಡಿಸಲಾಗದು. ಈ ಬಗ್ಗೆ ಸಮಗ್ರವಾದ ವಿವರಣೆ ನೀಡಿ ಎಂದು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು.
ಅಲ್ಲದೇ, ಮುಂದಿನ ವಿಚಾರಣೆ ವೇಳೆ ನ್ಯಾಯಾಲಯ ಕೇಳಿರುವ ಪ್ರಶ್ನೆಗಳಿಗೆ ಹಾಗೂ ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳಿಗೆ ಸರ್ಕಾರ ಕಾನೂನಿನ ನೆಲಗಟ್ಟಿನಲ್ಲಿ ಸಮರ್ಪಕ ಉತ್ತರ ನೀಡಬೇಕು. ಹೆಚ್ಚು ಕಾಲ ಈ ಅರ್ಜಿ ವಿಚಾರಣೆ ಮುಂದೂಡುತ್ತಾ ಹೋಗಲು ಸಾಧ್ಯವಿಲ್ಲ. ನ್ಯಾಯಾಲಯವು ತ್ವರಿತವಾಗಿ ತನ್ನ ನಿರ್ಧಾರ ಪ್ರಕಟಿಸುವ ಮೂಲಕ ಅರ್ಜಿ ವಿಲೇವಾರಿ ಮಾಡಬೇಕಿದೆ. ಸರ್ಕಾರವು ವಿವರಣೆ ನೀಡಿದರೆ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಮುನ್ನ ಸರ್ಕಾರಿ ವಕೀಲರು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು, ಕಾನೂನುಗಳನ್ನು ಪರಿಶೋಧಿಸಿ, ಮಾಹಿತಿ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿತು.
ಖಾಸಗಿ ಶಾಲೆಗಳಿಗೂ ಅನ್ವಯ: ಸರ್ಕಾರದ ಸ್ಪಷ್ಟನೆ-ಅರ್ಜಿ 2024ರ ಫೆಬ್ರವರಿ 2ರಂದು ವಿಚಾರಣೆಗೆ ಬಂದಾಗ, ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಇತರ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ಹಿಂದಿನ ಆದೇಶದಲ್ಲಿ ಹೇಳಲಾಗಿತ್ತು. ಸದ್ಯ ಆ ಆದೇಶಕ್ಕೆ ಫೆಬ್ರವರಿ 7ರಂದು ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ ಹಾಗೂ ಪ್ರಾಧಿಕಾರ ಮುಂದಾದ ಅರೆಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂಬುದಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:ಒಪ್ಪಂದ ವಿವಾಹ ವಿಚ್ಛೇದನ ಮಂಜೂರು ಮಾಡಲು ಕೌಟುಂಬಿಕ ನ್ಯಾಯಾಲಯಕ್ಕೆ ಅಧಿಕಾರವಿದೆ: ಹೈಕೋರ್ಟ್