ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಧಾರವಾಡ :ಹೃದಯ ಸಂಬಂಧಿ ಯೋಜನೆಗೆ ಪುನೀತ್ ರಾಜ್ಕುಮಾರ್ ಹೆಸರಿಟ್ಟಿದ್ದೇವೆ. ಹೃದಯಾಘಾತವಾದಾಗ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗದೇ ಸತ್ತವರು ಅನೇಕರಿದ್ದಾರೆ. ಹೃದಯ ಆರೋಗ್ಯವಾಗಿರಬೇಕು. ಅದೇ ನಿಂತು ಹೋದರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಧಾರವಾಡದ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೃದಯಾಘಾತವಾದಾಗ ಆಸ್ಪತ್ರೆಗೆ ಹೋಗುತ್ತಾರೆ. ಅವರಿಗೆ ಅಗತ್ಯ ಚಿಕಿತ್ಸೆ ಸಿಗಬೇಕು. ಇಸಿಜಿ ಮಷಿನ್ ಒಂದು ಫೋನ್‌ಗೆ ಲಿಂಕ್ ಆಗಿರುತ್ತದೆ. ತಾಲೂಕು ಆಸ್ಪತ್ರೆಯಲ್ಲಿ ಇಸಿಜಿ ಮಾಡುತ್ತಾರೆ. ಸ್ಟೆಮಿ ಕಿಟ್ ಹಾಗೂ Tenecteplase ಇಂಜಕ್ಷನ್ ಬಿಡುಗಡೆ ಮಾಡಿದ್ದೇವೆ. 71 ತಾಲೂಕು ಆಸ್ಪತ್ರೆಯಲ್ಲಿ ಇಂಜಕ್ಷನ್ ಕೊಡಲಾಗಿದೆ. ಬ್ಲಾಕ್ನ್ನು ಈ ಇಂಜಕ್ಷನ್ ತೆಗೆದು ಹಾಕುತ್ತದೆ. ಈ ಇಂಜಕ್ಷನ್ ಜೀವ ಉಳಿಸುವ ಕೆಲಸ ಮಾಡುತ್ತದೆ. ಆನಂತರ ಹೆಚ್ಚಿನ ಚಿಕಿತ್ಸೆ ಆ ವ್ಯಕ್ತಿಗೆ ಅನಿವಾರ್ಯವಾಗುತ್ತದೆ ಎಂದು ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.
ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ಬಡವರಿಗೆ ಈ ಇಂಜಕ್ಷನ್ ಸಿಗಬೇಕು ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ. ಬರುವ ದಿನಗಳಲ್ಲಿ ಈ ಇಂಜಕ್ಷನ್ ಅನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲೂ ಇಡುವ ಯೋಜನೆ ಸರ್ಕಾರದ ಮುಂದೆ ಇದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದೇವೆ. ಎರಡನೇ ಹಂತದ ಯೋಜನೆಯಡಿ ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಸೇರಿದಂತೆ 5 ಜಿಲ್ಲೆ, 36 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದೆ. ಬರುವ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಿಸುತ್ತೇವೆ. ಸದ್ಯ ರಾಜ್ಯದ 15 ಜಿಲ್ಲೆ 71 ತಾಲೂಕು ಆಸ್ಪತ್ರೆಯಲ್ಲಿ ಈ ಯೋಜನೆ ಜಾರಿಯಲ್ಲಿದೆ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಚಿವ ಸಂತೋಷ್ ಲಾಡ್ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಗುಂಡೂರಾವ್ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ :ಶ್ರವಣ ದೋಷ ಮುಕ್ತ ಕರ್ನಾಟಕ ನಮ್ಮ ಗುರಿ: ದಿನೇಶ್ ಗುಂಡೂರಾವ್