ಬೆಂಗಳೂರು: ಅಪಹರಣ ಆರೋಪ ಪ್ರಕರಣದಲ್ಲಿ ಕಳೆದ ಐದು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಲಿದೆ. ರೇವಣ್ಣ ಅವರಿಗೆ ಜಾಮೀನು ಸಿಗುತ್ತಾ? ಅಥವಾ ನ್ಯಾಯಾಂಗ ಬಂಧನ ಅವಧಿ ಮುಂದುವರೆಯುತ್ತಾ? ಎಂಬುದು ಗೊತ್ತಾಗಲಿದೆ.
11.30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ. ಕಳೆದ ಶುಕ್ರವಾರ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದ್ದರು. ಸರ್ಕಾರಿ ಪರ ವಕೀಲೆ ಜಯ್ನಾ ಕೊಠಾರಿ ಸಹ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಪ್ರಕರಣದ ಮೇಲಾಗುವ ವ್ಯತಿರಿಕ್ತ ಪರಿಣಾಮ ಕುರಿತಂತೆ ಪ್ರತಿವಾದ ಮಾಡಿದ್ದರು.
ಅರ್ಜಿ ವಿಚಾರಣೆಗೂ ಒಂದು ದಿನ ಮೊದಲೇ ಅಪಹರಣ ಮಾಡಲಾಗಿದೆ ಎಂದು ದಾಖಲಾಗಿದ್ದ, ಮಹಿಳೆಯದ್ದು ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಮಹಿಳೆ, ನಾನು ಕಿಡ್ನ್ಯಾಪ್ ಆಗಿರಲಿಲ್ಲ. ನಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಇಟ್ಟುಕೊಂಡು ರೇವಣ್ಣ ಪರ ವಕೀಲರು ಸಂತ್ರಸ್ತೆ ಕಿಡ್ನ್ಯಾಪ್ ಆಗಿರಲಿಲ್ಲ. ಬಲವಂತವಾಗಿ ಸಿಆರ್‌ಪಿಸಿ 164 ಹೇಳಿಕೆ ಕೊಡಿಸಲಾಗಿದೆ ಎಂದು ವಾದಿಸಬಹುದು.