ಬೆಂಗಳೂರು: ಕೋಲಾರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಂಗ್ರೆಸ್‌ನಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ನಾವು ಅಭ್ಯರ್ಥಿಯ ಅಧಿಕೃತ ಘೋಷಣೆ ಮುಂದೂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಯಾರನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ನಮ್ಮಲ್ಲಿ ಎರಡು ಪಂಗಡದ ಅಭ್ಯರ್ಥಿಗಳಿದ್ದಾರೆ. ಪಕ್ಷದಲ್ಲಿ ಶಿಸ್ತಿನಿಂದ ಇರುವವರ ಹೆಸರನ್ನು ಘೋಷಣೆ ಮಾಡುತ್ತೇವೆ. ಯಾವುದೇ ಗೊಂದಲ ಇಲ್ಲ. ಇದೇ ವೇಳೆ, ಕೋಲಾರ ರಾಜಕೀಯದ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಅವರ (ಕಾಂಗ್ರೆಸ್) ಒಳಜಗಳದಿಂದ ನಮಗೆ ಲಾಭವಾಗಲಿದೆ ಎಂದು ಹೇಳಿದರು.
ನನಗೆ ಸುಮಲತಾ ಶತ್ರುವಲ್ಲ:ಅಲ್ಲದೇ, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿಕೊಂಡಿದ್ದೇವೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಎಲ್ಲ ಕ್ಷೇತ್ರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ನನಗೆ ಶತ್ರುವಲ್ಲ. ಅಂಬರೀಶ್ ಬದುಕಿದ್ದಾಗ ಅವರ ಮನೆಯಲ್ಲಿ ಜತೆಯಾಗಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ಊಟ ಬಡಿಸಿದ್ದಾರೆ. ಯಾವುದನ್ನು ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ. ರಾಜಕೀಯ ಸನ್ನಿವೇಶ ಸಂಘರ್ಷವಾಗಿದೆ. ರಾಮ - ಆಂಜನೇಯ ಯುದ್ಧವಾಗಿದೆ. ನಾವು ಹುಲುಮಾನವರು. ಸಮಯ ಬಂದಾಗ ಸುಮಲತಾ ಅವರ ಜೊತೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಪಪಡಿಸಿದರು.