ತುಮಕೂರು: ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಲು ಯಡಿಯೂರಪ್ಪನವರೇ ಕಾರಣ. ನಮಗಿಂತ ಹೆಚ್ಚು ಶಾಸಕರಿದ್ರೂ ನಮಗೆ ಅವಕಾಶ ಕೊಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿಂದು ವಿ.ಸೋಮಣ್ಣ ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು-ಅವರು ಸೇರಿ 2006ರಲ್ಲಿ ಸರ್ಕಾರ ರಚಿಸಿದ್ದೆವು. 4 ಸಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹಿರಿಯರಾದ ಯಡಿಯೂರಪ್ಪನವರು ಆಗಮಿಸಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂಪಾಯಿ ಕೊಡ್ತಿದ್ದರು ಎಂದರು.
ಆದ್ರೆ ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾವು ನುಡಿದಂತೆ ನಡೆದಿದ್ದೇವೆ ಅಂತಾ ಹೇಳ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಅಂತಾ ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದಾರೆ. ನಾಡಿನ ತೆರಿಗೆಯ ಹಣವನ್ನು ದುಂದು ವೆಚ್ಚ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ನೀವು ಇದನ್ನು ಹೇಳಬೇಕಾಗುತ್ತೆ ಎಂದರು.