ಬೆಂಗಳೂರು: ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿ ಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗ ಮುಡಾ ಹಗರಣದ ಮೂಲಕ ಜನರ ದಿಕ್ಕು ತಪ್ಪಿಸಲು ಜಾತಿ ಗಣತಿಯ ವಿಚಾರವನ್ನು ಮುಂದಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಕ್ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat) ಚುನಾವಣೆಗೆ ಮೊದಲೇ ವರದಿ ಕೊಟ್ಟಿದ್ದರು :ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಈಗ ಅ ವರದಿಗೆ 10 ವರ್ಷ ಆಗಿ ಹೋಗಿದೆ. 10 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿವೆ. ಹಳೆಯ ಜಾತಿ ಗಣತಿ ವರದಿಯನ್ನು ಇಷ್ಟು ದಿನ ಯಾಕೆ ಬಿಡುಗಡೆ ಮಾಡಿರಲಿಲ್ಲ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಕುಮಾರಸ್ವಾಮಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲು ಬಿಡಲಿಲ್ಲ ಎಂದು ನನ್ನ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಲೋಕಸಭೆ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರ ಕೈಗೆ ಜಾತಿಗಣತಿ ವರದಿ ಕೊಡಲಾಗಿದೆ ಅಲ್ಲವೇ? ಲೋಕಸಭೆ ಚುನಾವಣೆ ಮೊದಲೇ ವರದಿ ಪಡೆದರೂ ಇಷ್ಟು ದಿನಗಳವರೆಗೂ ಅದರ ಬಗ್ಗೆ ಸದ್ದೇ ಇರಲಿಲ್ಲ, ಯಾಕೆ? ಎಂದು ಪ್ರಶ್ನಿಸಿದರು.
ಮುಡಾ ಅಕ್ರಮದಿಂದ ರಕ್ಷಣೆ ಪಡೆಯಲು ಯತ್ನ :ಈಗ ಮುಡಾ ಹಗರಣದ ಹಿನ್ನೆಲೆಯಲ್ಲಿ ಜನರನ್ನು ದಾರಿ ತಪ್ಪಿಸಲು ಮತ್ತು ಜಾತಿ ಗಣತಿ ವರದಿ ಇಟ್ಟುಕೊಂಡು ಮೂಡಾ ಅಕ್ರಮದಿಂದ ರಕ್ಷಣೆ ಪಡೆಯುವ ಕೆಲಸಕ್ಕೆ ಹೊರಟಿದ್ದಾರೆ. 10 ವರ್ಷಗಳ ಹಿಂದೆ ಮಾಡಿರುವ ಈ ಜಾತಿ ಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನುಕೂಲಗಳು ಆಗುವುದಿಲ್ಲ. ಮುಡಾ ಹಗರಣವನ್ನು ಮರೆಮಾಚಿಕೊಳ್ಳಲು ಈಗ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇಷ್ಟು ದಿನ ಇಲ್ಲದೇ ಇರೋದು ಈಗ ಯಾಕೆ ಮುನ್ನಲೆಗೆ ತರಲು ಹೊರಟಿದ್ದಾರೆ ಎಂದು ನೇರ ಆರೋಪ ಮಾಡಿದರು.
ಜಾತಿ ಗಣತಿ ವರದಿ ಜಾರಿ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ವಿನಾ ಕಾರಣ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡಿ ಎಷ್ಟು ದಿನವಾಯಿತು? ಇನ್ನೂ ಯಾಕೆ ಇಟ್ಟುಕೊಂಡು ಕೂತಿದ್ದಾರೆ? ಇಷ್ಟು ದಿನ ಸದ್ದುಗದ್ದಲ ಇರಲಿಲ್ಲ. ಈಗ ಈ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಜಾತಿಯಂತಹ ವಿಷಯಗಳನ್ನು ಮುಂದೆ ಬಿಟ್ಟುಕೊಂಡು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ : ಜಾತಿ ಗಣತಿ ವರದಿ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ, ಈ ವಿಷಯ ಇಟ್ಟುಕೊಂಡು ಚುನಾವಣೆ ಹೋಗಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಕುಮಾರಸ್ವಾಮಿ ಅವರು, ಸರ್ಕಾರ ಹೋದರೆ ಹೋಗಲಿ ಎನ್ನುವ ಬದಲಿಗೆ ಮುಕ್ತವಾಗಿ ಘೋಷಣೆ ಮಾಡಿ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದರು.
ಸರ್ಕಾರ ಹೋದರೆ ಹೋಗಲಿ, ಜಾತಿ ಗಣತಿ ಜಾರಿ ಮಾಡಿ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು; ಜಾತಿ ಗಣತಿ ವಿಷಯ ಇಟ್ಟುಕೊಂಡು ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ ನೋಡೋಣ. ಹರಿಪ್ರಸಾದ್ ಅವರು ಈ ರೀತಿ ಹೇಳುವುದು ಏನಿದೆ? ಅದರ ಬದಲು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬಹುದಲ್ಲವೆ? ಎಂದರು.
ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ಜಾತಿ ಗಣತಿ ವರದಿ ಇಟ್ಟುಕೊಂಡು ನಾವು ಅನುಷ್ಠಾನ ಮಾಡುತ್ತೇವೆ, ನಮಗೆ ಇನ್ನೊಂದು ಅವಕಾಶ ಕೊಡಿ ಅಂತ ಜನರ ಮುಂದೆ ಹೋಗಬಹುದು. ದೆಹಲಿಯಲ್ಲಿ ರಾಹುಲ್ ಗಾಂಧಿ ಒಂದು ಹೇಳುತ್ತಾರೆ, ಇಲ್ಲಿ ಇವರು ಇನ್ನೊಂದು ಹೇಳುತ್ತಾರೆ. ಸರ್ಕಾರದಲ್ಲಿ ಆಗಿರುವ ಹಲವಾರು ತಪ್ಪುಗಳನ್ನು ಮುಚ್ಚಿಕೊಳ್ಳೋದಕ್ಕೆ ಜಾತಿ ಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಇದೆಲ್ಲವನ್ನು ಜನರ ಮನಸಿನಿಂದ ಡೈವರ್ಟ್ ಮಾಡೋದಕ್ಕೆ ಈ ಡ್ರಾಮಾಗಳು ಪ್ರಾರಂಭ ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಮಸಿ ಬಳಿಯಲು ಯತ್ನಿಸುತ್ತಿದ್ದಾರೆ, ಆ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ : ಸಿಎಂ ಸವಾಲು - CM Siddaramaiah