ಬೆಂಗಳೂರು: "ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಉಳಿಯುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ" ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹವ್ಯಕ ಸಮಾಜಕ್ಕೆ ಭರವಸೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸಮಾರೋಪಗೊಂಡ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಹವ್ಯಕ ಭಾಷೆ ಅಭಿವೃದ್ಧಿಗೆ ಪ್ರತ್ಯೇಕ ಅಕಾಡೆಮಿ, ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಂತಹ ಎಲ್ಲಾ ಪ್ರಯತ್ನಗಳಿಗೆ ನನ್ನ ಬೆಂಬಲ ಇದೆ" ಎಂದರು.
ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಗೌರವ ಅರ್ಪಣೆ. (ETV Bharat) ಅಡಕೆ ಬೇಸಾಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಹವ್ಯಕರು ಆತಂಕಪಡಬೇಕಿಲ್ಲ. ನಾನು ಸ್ವತಃ ಅಡಕೆ ಬೆಳೆಗಾರನಾಗಿದ್ದೇನೆ. ಅಡಕೆಯ ಬೆಳೆಗಾರರ ಸಂಕಷ್ಟಗಳು ಏನು ಎಂಬುದನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇನೆ. ಹೀಗಾಗಿ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅಡಕೆ ಸಂಶೋಧನೆಗೆ 10 ಹತ್ತು ಕೋಟಿಯನ್ನು ಕೇಂದ್ರ ಈಗಾಗಲೇ ನೀಡಿದೆ. ಅಡಕೆ ಬಗ್ಗೆ ಅಪಪ್ರಚಾರ ಅನಗತ್ಯ, ಅದನ್ನು ಹತ್ತಿಕ್ಕಲು ಕೇಂದ್ರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಅಡಕೆ ಬೆಳೆಗಾರರ ಸಮಸ್ಯೆಗಳನ್ನು ನಾನು ಸೇರಿದಂತೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಎಲ್ಲ ಸಚಿವರು ಸೇರಿ ಬಗೆಹರಿಸುವ ಬಗ್ಗೆ ಪ್ರಾಮಾಣಿಕ ಮಾಡುತ್ತೇವೆ ಎಂದು ಹೇಳಿದರು.
ತೃತೀಯ ವಿಶ್ವ ಹವ್ಯಕ ಸಮ್ಮೇಳನ. (ETV Bharat) ನಿಮ್ಮ ಸಾಧನೆ- ಬುದ್ದಿವಂತಿಕೆ, ಕೊಡುಗೆ ಸಣ್ಣದಲ್ಲ;ಹವ್ಯಕ ಸಮುದಾಯ ಗಾತ್ರದಲ್ಲಿ ಸಣ್ಣದು ಇರಬಹುದು. ಆದರೆ, ನಿಮ್ಮ ಸಾಧನೆ, ಬುದ್ಧಿವಂತಿಕೆ, ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಸಣ್ಣದಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಛಾಪು ಗಣನೀಯವಾಗಿದೆ. ಸಾಹಿತ್ಯ, ಸಂಗೀತ, ಕಲೆ, ಮಾಧ್ಯಮ ಸೇರಿ ಅನೇಕ ಕ್ಷೇತ್ರಗಳಲ್ಲಿ ನಿಮ್ಮ ಸಮುದಾಯ ಅಚ್ಚಳಿಯದ ಛಾಪು ಮೂಡಿಸಿದೆ ಎಂದು ಕುಮಾರಸ್ವಾಮಿ ಶ್ಲಾಘಿಸಿದರು.
ನಮ್ಮ ಹಳ್ಳಿಯ ಗ್ರಾಮೀಣ ಸೊಗಡು ಮರೆಯುತ್ತಿದ್ದೇವೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗಳ ಅಸ್ತಿತ್ವ ನಶಿಸಿ ಹೋಗುತ್ತಿದೆ. ಅದರ ಬಗ್ಗೆ ನಾವು ಆಲೋಚನೆ ಮಾಡಬೇಕಿದೆ. ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳು ಹಾಗೆಯೇ ಇವೆ, ಮೂಲಸೌಕರ್ಯಗಳು ಇಲ್ಲ, ಇದನ್ನು ಸುಧಾರಣೆ ಮಾಡುವ ಅಗತ್ಯ ಇದೆ. ನಮ್ಮ ಪೂರ್ವಜರು ಬಹಳ ಶಿಸ್ತಿನಿಂದ ಬದುಕುತ್ತಿದ್ದರು, ಆದರೆ, ಇವತ್ತು ಅಂತಹ ಪರಿಸ್ಥಿತಿ ಇಲ್ಲ. ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿ ಅಂತಹ ಶಿಸ್ತು ಬರಬೇಕಿದೆ. ಇಲ್ಲವಾದರೆ ಅಭಿವೃದ್ಧಿ ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (ETV Bharat) ದಿವಂಗತ ರಾಮಕೃಷ್ಣ ಹೆಗಡೆ ಅವರ ಸಹೋದರ ಗಣೇಶ ಹೆಗಡೆ ಅವರ ಮನೆಗೆ ಒಮ್ಮೆ ಭೇಟಿ ನೀಡಿದ್ದೆ. ಅವರ ಧರ್ಮಪತ್ನಿ ಅವರು ನನಗೆ ಮಾತೃ ಸಮಾನರು. ನಾನು ಹೋದ ಕ್ಷಣ ಅವರೆಷ್ಟು ಸಂತೋಷಪಟ್ಟರು ಎಂದರೆ, ಬಹಳ ದಿನಗಳಿಂದ ತಪ್ಪಿಹೋದ ಮಗ ಮನೆಗೆ ಬಂದ ಎನ್ನುವಷ್ಟು ವಾತ್ಸಲ್ಯ ತೋರಿದರು. ನನಗೆ ಈಗಲೂ ಆ ಸಂದರ್ಭ ಕಣ್ಣಿಗೆ ಕಟ್ಟಿದಂತಿದೆ ಎಂದು ಸ್ಮರಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಹರಿಹರದ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿಗಳು, ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಂಚಿ ಕಾಮಕೋಟಿ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಆನ್ಲೈನ್ ವೇದಿಕೆಯ ಮೂಲಕ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮ್ಮೇಳನದ ಗೌರವಾಧ್ಯಕ್ಷ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹೊರನಾಡು ಕ್ಷೇತ್ರದ ಧರ್ಮಾಧಿಕಾರಿ ಭೀಮೇಶ್ವರ ಜೋಷಿ, ಮಾಜಿ ಸಚಿವ ಸಿ.ಟಿ. ರವಿ, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಪತ್ರಿಕೆಯ ಸಮೂಹ ಸಂಪಾದಕ ರವಿ ಹೆಗಡೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಮತ್ತು ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದನ್ನೂ ಓದಿ:ಒಪಿಎಸ್, ಆರೋಗ್ಯ ಸೇವೆ ಹಾಗೂ ಸೆಂಟ್ರಲ್ ಪೇ ಜಾರಿಯೇ ನಮ್ಮ ಆದ್ಯತೆ : ಸಿ.ಎಸ್.ಪಡಾಕ್ಷರಿ