ಕರ್ನಾಟಕ

karnataka

ಹೆಚ್.ಡಿ. ಕುಮಾರಸ್ವಾಮಿ ಗಣಿಗಾರಿಕೆಗೆ ಅನುಮತಿ ನೀಡಿರುವ ವಿಚಾರ: ಹಿರೇಮಠ ಆಕ್ರೋಶ - S R HIREMATH OUTRAGE

By ETV Bharat Karnataka Team

Published : Jun 18, 2024, 7:45 PM IST

ಹೆಚ್.ಡಿ. ಕುಮಾರಸ್ವಾಮಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಈಗ ಈ ವಿಚಾರ ಚರ್ಚೆ ಆಗುತ್ತಿದೆ. ಈ ಕುರಿತಂತೆ ಸಾಮಾಜಿಕ ಹೋರಾಟಗಾರ ಎಸ್​ ಆರ್​ ಹಿರೇಮಠ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

HD KUMARASWAMY  PERMISSION TO MINERS  DHARWAD
ಹಿರೇಮಠ ಆಕ್ರೋಶ (ETV Bharat)

ಧಾರವಾಡ:ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿತ್ತು. ಆಗ ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸಿ ಅರಣ್ಯ ಸಂರಕ್ಷಿಸುವ ಕೆಲಸ ಮಾಡಿತ್ತು. ಆ ಸಂರಕ್ಷಿತ ಅರಣ್ಯ ಈಗ ಮತ್ತೆ ಗಂಡಾಂತರಕ್ಕೆ ಬಂದಿದೆ. ಕೆಐಒಸಿಎಲ್ ಗಣಿಗಾರಿಕೆ ಸ್ವಾಮಿಮಲೈನಲ್ಲಿ ನಡೆಸಲಿದ್ದಾರೆ. ಅಲ್ಲಿ ಅಪರೂಪದ ಸಸ್ಯರಾಶಿ ಇದೆ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೊದಲ ದಿನವೇ ಇದಕ್ಕೆ ಸಹಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಈ ನಿರ್ಧಾರವನ್ನು ಕುಮಾರಸ್ವಾಮಿ ಅವರು ವಾಪಸ್ ಪಡೆಯಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರೋರು ದೇಶ, ಜನರ ಹಿತ ಕಾಪಾಡಬೇಕು. ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತದೆ. ಕೆಐಒಸಿಎಲ್, ವಿಎಸ್ ಕಂಪನಿಗೆ ಗಣಿಗಾರಿಕೆ ಅನುಮತಿ ಕೊಡುತ್ತಿದ್ದಾರೆ. ಅದು ಎರಡನ್ನೂ ರದ್ದು ಮಾಡಬೇಕು. ಸ್ಥಳೀಯ ಜನರೊಂದಿಗೆ ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಸಮಗ್ರ ಚರ್ಚೆ ಆಗಬೇಕು.‌ ಸುಪ್ರೀಂನಲ್ಲಿ ಇನ್ನೂ ಕೇಸ್ ನಡೀತಾ ಇದೆ. ಕಳೆದ ಮಾರ್ಚ್​ನಲ್ಲೇ ಸುಪ್ರೀಂ ಆದೇಶ ಆಗಿದೆ ಎಂದು ಹಿರೇಮಠ ಹೇಳಿದರು.

ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಗಣಿಗಾರಿಕೆ ಬಗ್ಗೆ ಸಮಗ್ರವಾಗಿ ಪರಿಶೀಲಿಸಲು ಸುಪ್ರೀಂಕೋರ್ಟ್​ ಆದೇಶಿಸಿತ್ತು. ನಾಲ್ಕು ತಿಂಗಳಿನಲ್ಲಿ ಸಮಗ್ರವಾದ ವರದಿ ಕೊಡಲು ಆದೇಶಿಸಿತ್ತು. ಇಷ್ಟು ಕಷ್ಟಪಟ್ಟು ಸುಪ್ರೀಂ ಕೋರ್ಟ್​​ನಿಂದ ಆದೇಶ ಮಾಡಿಸಿದ್ದೇವೆ. ಎರಡೂ ಸರ್ಕಾರ ಸೇರಿ ಈ ಎರಡು ಗಣಿಗಾರಿಕೆ ಅನುಮತಿ ರದ್ದು ಮಾಡಬೇಕು. ಈ ಸಂಬಂಧ ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನೂ ಭೇಟಿ ಮಾಡಲಿದ್ದೇವೆ. ಈಗಾಗಲೇ ಸುಪ್ರೀಂ ಕೋರ್ಟ್​​ನಿಂದ ಛೀಮಾರಿ ಹಾಕಿಸಿಕೊಂಡು ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ. ಅದು ಮತ್ತೆ ಮರುಕಳಿಸಬಾರದು ಎಂದು ಒತ್ತಾಯಿಸಿದರು.

ಅಪರೂಪದ ಜೈವಿಕ ವೈವಿದ್ಯತೆ ಇರುವ ಅರಣ್ಯ ಪ್ರದೇಶ ಅದು. ಕಪ್ಪತಗುಡ್ಡದ ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ. ಸಿಎಂ ಮತ್ತು ಕಾನೂನು ಸಚಿವರನ್ನೂ ಭೇಟಿ ಮಾಡುತ್ತೇವೆ. ನಾಳೆ ಕಾನೂನು ಸಚಿವ ಹೆಚ್‌ಕೆ‌ ಪಾಟೀಲ ಅವರನ್ನು ಭೇಟಿಯಾಗುತ್ತೇವೆ. ನಾಡಿದ್ದು ಅರಣ್ಯ ಸಚಿವರನ್ನು ಭೇಟಿಯಾಗುತ್ತೇವೆ. ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಜಸ್ಟಿಸ್ ಸುದರ್ಶನ್​ ರೆಡ್ಡಿಯವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಅವರನ್ನು ಭೇಟಿಯಾಗಿ ಸಮಗ್ರ ಚಿತ್ರಣ ನೀಡುತ್ತೇವೆ. ಸುಪ್ರಿಂ ಕೋರ್ಟ್ ನ್ಯಾಯ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸ ನಮಗೆ ಇದೆ. ಹೆಚ್​ಡಿಕೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಮೊದಲು ಅಧಿಕಾರಿಗಳಿಂದ ಸೌಜನ್ಯವಾಗಿ ಮಾಹಿತಿ ಪಡೆಯಬೇಕಿತ್ತು. ಆದರೆ ದಿಢೀರ್ ಅಂತಾ ಯಾಕೆ ಸಹಿ ಮಾಡಿದ್ರು?. ಅಷ್ಟು ದಿಢೀರ್​ ಯಾಕೆ ಮಾಡಿದ್ರು ಅನ್ನೋದನ್ನು ಅವರೇ ಹೇಳಬೇಕು. ತಪ್ಪು ಆಗಿದೆ. ಆ ತಪ್ಪನ್ನು ಅವರು ಸರಿಪಡಿಸಬೇಕು ಎಂದು ಹಿರೇಮಠ ಆಗ್ರಹಿಸಿದರು.

ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್​ಗೆ ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು - Renukaswamy murder case

ABOUT THE AUTHOR

...view details