ಕರ್ನಾಟಕ

karnataka

ETV Bharat / state

ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ವಿವಾದಿತ ಹೇಳಿಕೆ: ಆಯೋಜಕರ ವಿರುದ್ಧದ ಪ್ರಕರಣಕ್ಕೆ ತಡೆ - Udhayanidhi Stalin - UDHAYANIDHI STALIN

ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಪ್ರಕರಣದಲ್ಲಿ, ಕಾರ್ಯಕ್ರಮದ ಆಯೋಜಕರ ವಿರುದ್ಧ ದಾಖಲಾಗಿದ್ಧ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 21, 2024, 7:09 PM IST

ಬೆಂಗಳೂರು:ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​ ಮಗ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಎಂಬುದಾಗಿ ಹೇಳಿಕೆ ನೀಡಿದ್ಧ ಕಾರ್ಯಕ್ರಮದ ಆಯೋಜಕರ ವಿರುದ್ಧ ದಾಖಲಾಗಿದ್ಧ ಖಾಸಗಿ ದೂರಿನ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ದೂರುದಾರ ಪರಮೇಶ್ವರ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿತು.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕಾರ್ಯಕ್ರಮದ ಆಯೋಜಕರಾದ ಸು.ವೆಂಕಟೇಷನ್, ಕುರ ರಾಮಲಿಂಗಂ ಮತ್ತು ಅಧವನ್‌ ಧೀಚನ್ಯ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಹಾಕಿತು.

ವಿಚಾರಣೆಯಲ್ಲಿ, ಅರ್ಜಿದಾರರು ಕಾರ್ಯಕ್ರಮ ಆಯೋಜಿಸಿದ್ದರು. ಅವರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮ ನಡೆದ ಚರ್ಚೆ ಸಂಬಂಧ ಬೆಂಗಳೂರಿನಲ್ಲಿ ಖಾಸಗಿ ದೂರು ದಾಖಲಾಗಿದೆ. ಹೀಗಾಗಿ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠ, ಮುಂದಿನ ವಿಚಾರಣೆವರೆಗೂ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ದೂರುದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ವಾದದ ಪ್ರಮುಖ ಅಂಶಗಳು:ವಿಚಾರಣೆ ವೇಳೆ ನ್ಯಾಯಪೀಠ, ನಾವು ಕೆಲವು ನಂಬಿಕೆಗಳನ್ನು, ನಿರ್ಬಂಧಗಳನ್ನು, ಧರ್ಮ ಗ್ರಂಥಗಳನ್ನು ಒಪ್ಪುತ್ತೇವೋ, ಇಲ್ಲವೋ ಎನ್ನುವುದು ಒಂದಾದರೆ, ಅವುಗಳನ್ನು ಅವಮಾನಿಸುವುದು ಮತ್ತೊಂದಾಗಿದೆ ಎಂದು ತಿಳಿಸಿತು. ಈ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಹಿಂದೂ ಧರ್ಮ ಹೊರತುಪಡಿಸಿ ವಿಶ್ವದ ಇತರೆ ಧರ್ಮಗಳು ಏಕ ದೇವತಾ ವಾದವಾಗಿದೆ. ಹಿಂದೂ ಧರ್ಮ ಪ್ರಾರಂಭದಿಂದ ನಾಸ್ತಿಕತೆ ಜತೆಗೆ ಆಸ್ತಿಕತೆಯನ್ನು ಅನುಸರಿಸುತ್ತದೆ. ಹಿಂದೂಗಳಲ್ಲಿನ ಸಹಿಷ್ಣುತೆ ಅತ್ಯಂತ ಉತ್ತಮ ಸ್ಥಾನದಲ್ಲಿದೆ. ಇದಕ್ಕೆ ಪೀಠ, ಇದೇ ಕಾರಣದಿಂದ ದೇಶಕ್ಕೆ ಅನೇಕ ಧರ್ಮಗಳು ಆಗಮಿಸಿವೆ. ಕ್ರಿಶ್ಚಿಯನ್ ಧರ್ಮ ಯುರೋಪ್ ಪ್ರವೇಶಕ್ಕೂ ಮುನ್ನ ಭಾರತಕ್ಕೆ ಬಂದಿತ್ತು. ಯಹೂದಿಗಳು, ಪಾರ್ಸಿಗಳು, ಮುಸ್ಲಿಮರು ಬಂದಿರುವುದಾಗಿ ಜವಹರಲಾಲ್ ನೆಹರೂ ಗ್ಲಿಂಪ್ಸ್​ಸ್ ಆಫ್ ವರ್ಲ್ಡ್ ಹಿಸ್ಟರಿ ಪುಸ್ತಕದಲ್ಲಿ ಬರೆದಿರುವುದಾಗಿ ತಿಳಿಸಿದರು.

ವಾದ ಮುಂದುವರೆಸಿದ ರವಿವರ್ಮ ಕುಮಾರ್, ಇತರೆ ಧರ್ಮಗಳು ಭಾರತಕ್ಕೆ ಏಕೆ ಬಂದವು ಎಂಬುದು ಅತ್ಯಂತ ಆಸಕ್ತಿದಾಯಕವಾಗಿದೆ. ಆದರೆ, ಬೌದ್ಧ ಧರ್ಮವನ್ನು ಭಾರತದಿಂದ ಹೊರಹಾಕಲಾಯಿತು ಎಂದು ತಿಳಿಸಿದರು.‌ ಇದಕ್ಕೆ ಪೀಠ, ಬೌದ್ಧ ಧರ್ಮ ಹಿಂದೂ ಧರ್ಮದ ಭಾಗ ಎಂಬುದಾಗಿ ಪಣಿಕ್ಕರ್ ತಮ್ಮ‌ ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ಹೇಳಿತು.

ಗೋವುಗಳನ್ನು ಸಾಗಿಸುತ್ತಿದ್ದ ಮೂವರನ್ನು ಕೊಲೆ ಮಾಡಲಾಯಿತು, ಇದು ದೇಶದಲ್ಲಿ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಇದನ್ನು ಸಹನೆ ಎಂದು ಕರೆಯಬಹುದೇ ಎಂದು ರವಿವರ್ಮ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಪೀಠ, ಸಾವಿರಾರು ಪಂಡಿತರನ್ನು ಕೊಲ್ಲಲಾಗಿದೆ ಅನೇಕ ಮಹಿಳೆಯರಿಗೆ ಹಿಂಸೆ ನೀಡಿದ್ದು, ಹಲವು ಮಂದಿ‌ ದೇಶ ತೊರೆದಿದ್ದಾರೆ ಎಂದು ಇತಿಹಾಸ ಹೇಳುತ್ತದೆ ಎಂದು‌ ತಿಳಿಸಿತು. ನಾವು ಪರಸ್ಪರ ಒಪ್ಪಿದ್ದರೂ ಪರಸ್ಪರರನ್ನು ಗೌರವಿಸಬೇಕು. ಅದನ್ನೇ ನಮ್ಮ ಸಂವಿಧಾನ ಬಯಸುತ್ತದೆ. ಇದು ಒಂದು ನಿರ್ದಿಷ್ಟ ಸಮಯದಾಯಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಅನ್ವಯವಾಗಲಿದೆ. ನಾವು ಇಲ್ಲಿ ವಾಸಿಸುತ್ತಿದ್ದು, ಅದನ್ನು ನಮ್ಮ ಮಾತೃಭೂಮಿ ಎಂದು ಪರಿಗಣಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ದೂರಿನ ವಿವರ:2023ರ ಸೆಪ್ಟೆಂಬರ್ 3ರಂದು ಚೆನ್ನೈನ ತೆನಂಪೇಟೆಯಲ್ಲಿ ನಡೆದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಎಂದು ಉದಯನಿಧಿ ಸ್ಟಾಲಿನ್ ಭಾಷಣ ಮಾಡಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೇನೆ. ಈ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಈ ಹೇಳಿಕೆಯನ್ನು ಓದಿದ ಅನ್ಯ ಧರ್ಮಿಯರು ನನ್ನ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ ಎಂದು ಹೇಳಿದ್ದಾರೆ. ಆದ ಕಾರಣ ಉದಯನಿಧಿ ಸ್ಟಾಲಿನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದರು. ಪ್ರಕರಣ ಸಂಬಂಧ ಉದಯನಿಧಿ ಸ್ಟಾಲಿನ್ ಸೇರಿದಂತೆ ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಸನಾತನ ಧರ್ಮದ ಕುರಿತು ವಿವಾದಾತ್ಮ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್​ಗೆ ಅರಾ ಕೋರ್ಟ್​ ಸಮನ್ಸ್ ಜಾರಿ

ABOUT THE AUTHOR

...view details