ಬೆಂಗಳೂರು: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಮೀಸಲಾತಿ ಅಡಿಯಲ್ಲಿ ನೇಮಕಗೊಂಡ ಸರ್ಕಾರಿ ನೌಕರನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹೈ-ಕ ಪ್ರದೇಶದ ಹೊರ ಭಾಗಗಳಿಗೆ ವರ್ಗಾಯಿಸಿ ಸೇವೆಗೆ ನಿಯೋಜಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಅರ್ಹ ಅಥವಾ ಸೂಕ್ತ ವ್ಯಕ್ತಿ ಲಭ್ಯವಿಲ್ಲದಿದ್ದಲ್ಲಿ ಹೈ-ಕ ಮೀಸಲಿನಲ್ಲಿ ನೇಮಕವಾದವರನ್ನು ಹೊರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಹೈ-ಕ ಪ್ರದೇಶ ಮೀಸಲಾತಿ ಅಡಿಯಲ್ಲಿ ನೇಮಕವಾಗಿದ್ದ ಸಬ್ ರಿಜಿಸ್ಟ್ರಾರ್ ಎನ್.ಶ್ರೀಕಾಂತ್ ಎಂಬವರನ್ನು ಹೊರಪ್ರದೇಶಕ್ಕೆ ವರ್ಗಾಯಿಸಿದ್ದ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶವನ್ನು ಪ್ರಶ್ನಿಸಿ ಮತ್ತೊಬ್ಬ ಸಬ್ ರಿಜಿಸ್ಟ್ರಾರ್ ಎಸ್.ನಂದೀಶ್ ಎಂಬವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತರಾಮನಾಥ್ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲು)ಆದೇಶ ಪ್ರಕಾರ 2013ರಲ್ಲಿ ಹೈ-ಕ ಮೀಸಲು ಅಡಿಯಲ್ಲಿ ನೇಮಕವಾದವರನ್ನು ಹೊರ ಭಾಗಗಳಿಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ. ಆದ್ದರಿಂದ ಸಾರ್ವಜನಿಕ ಹಿತದೃಷ್ಠಿಯಿಂದ ಸರ್ಕಾರ ಹೊರ ಪ್ರದೇಶಕ್ಕೆ ವರ್ಗಾವಣೆ ಮಾಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ತಿಳಿಸಿದೆ.
ವರ್ಗಾವಣೆ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಲಾಗಿದೆ. 371ಜೆ ವಿಧಿಗೆ ಅನುಸಾರ ಹೊರಡಿಸಲಾದ ಸರ್ಕಾರಿ ಆದೇಶ ಮತ್ತು ಮಾರ್ಗಸೂಚಿಗಳನ್ನು ಅರ್ಜಿದಾರ ಪ್ರಶ್ನಿಸಿಲ್ಲ. ಹೀಗಾಗಿ ಮೇಲ್ಮನವಿದಾರರನ್ನು ಕಲಬುರಗಿಯ ಸೇಡಂನಲ್ಲಿ ಪೋಸ್ಟಿಂಗ್ ಮಾಡಿರುವುದರಿಂದ ವರ್ಗಾವಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ:ಎನ್.ಶ್ರೀಕಾಂತ್ ಅವರು ಹೈ-ಕ ವೃಂದದಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ನೇಮಕವಾಗಿದ್ದರು. ಇವರನ್ನು ತರಬೇತಿ ಬಳಿಕ ಚಿಕ್ಕಮಗಳೂರು ಬಳಿಕ ಮೈಸೂರು ಪಶ್ಚಿಮದ ಸಬ್ ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿತ್ತು. ಈ ನಡುವೆ ನಂದೀಶ್ ಎಂಬವರನ್ನು ಶ್ರೀಕಾಂತ್ ಅವರ ಹುದ್ದೆಗೆ ನಿಯೋಜಿಸಿದ್ದು, ಶ್ರೀಕಾಂತ್‌ಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.
ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಶ್ರೀಕಾಂತ್ ಅವಧಿಪೂರ್ವ ವರ್ಗಾವಣೆ ಎಂದು ಆರೋಪಿಸಿ (ಕೆಎಟಿ)ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ, ವರ್ಗಾವಣೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತ್ತು. ಇದರ ನಡುವೆಯೆ ಸರ್ಕಾರ ಶ್ರೀಕಾಂತ್ ಅವರನ್ನು ಕಲಬುರಗಿಯ ಸೇಡಂಗೆ ವರ್ಗಾವಣೆ ಮಾಡಿತ್ತು.
ಆದರೆ, ಕೆಎಟಿ ಆದೇಶದಿಂದ ನಂದೀಶ್ ಅವರ ವರ್ಗಾವಣೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನಂದೀಶ್ ಹೈಕೋರ್ಟ್ ಮೆಟ್ಟಿಲೇರಿ, ಶ್ರೀಕಾಂತ್ ಹೈ-ಕ ವೃಂದಲ್ಲಿ ನೇಮಕವಾಗಿದ್ದು, ಹತ್ತು ವರ್ಷಗಳ ಕಾಲ ಆ ಭಾಗದಿಂದ ಬೇರೆಡೆಗೆ ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಕೆಎಟಿ ಆದೇಶ ರದ್ದುಮಾಡಬೇಕು ಎಂದು ಕೋರಿದ್ದರು.