ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪ್ರದೇಶದಲ್ಲಿ ಖಾಸಗಿ ವ್ಯಕ್ತಿ ಅಕ್ರಮವಾಗಿ ಕಾಲೇಜು ಕಟ್ಟಡ ನಿರ್ಮಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ತೆಂಕಕಾರಂದೂರು ಗ್ರಾಮದ ನಿವಾಸಿ ಅಶೋಕ್ ಆಚಾರ್ಯ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್, ಸಣ್ಣ ನೀರಾವರಿ ಹಾಗೂ ಎಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ ಉಪ ವಿಭಾಗದ ಕಾರ್ಯಕಾರಿ ಎಂಜಿನಿಯರ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕುವೆಟ್ಟು ಗ್ರಾ.ಪಂ.ಪಿಡಿಒ, ಕಟ್ಟಡದ ಮಾಲೀಕ ಬಿ.ಸುಮಂತ್ ಕುಮಾರ್ ಜೈನ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿತು.