ಬೆಂಗಳೂರು:ಬೋರನಕಣಿವೆ ಜಲಾಶಯದ ಹೆಚ್ಚುವರಿ ನೀರನ್ನು ಬೇರೆ ಕಡೆಗೆ ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತು.
ಈ ಕುರಿತು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯ ಎಲ್.ರಮೇಶ್ ಸೇರಿದಂತೆ 8 ಮಂದಿ ಗ್ರಾಮಸ್ಥರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ಧ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಅದರ ಸಹಾಯಕ ಕಾರ್ಯಕಾರಿ ಎಂಜಿನಿಯರ್, ತುಮಕೂರು ಜಿಲ್ಲಾಧಿಕಾರಿ, ತಿಪಟೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಮತ್ತು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಎಸ್.ತ್ಯಾಗರಾಜ್, "ಬೋರನಕಣಿವೆ ಜಲಾಶಯಕ್ಕೆ ಶತಮಾನಗಳ ಇತಿಹಾಸವಿದೆ. ಇದನ್ನು 1892ರಲ್ಲಿ ಮೈಸೂರು ಮಹಾರಾಜರು ಕಟ್ಟಿಸಿದ್ದರು. ಇದು ರಾಜ್ಯದ ಮೊದಲ ಜಲಾಶಯ ಎಂದೂ ಹೇಳಲಾಗುತ್ತದೆ. ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯ 2,296 ದಶಲಕ್ಷ ಘನ ಅಡಿ ಇದ್ದು, 330 ಚದರ ಮೈಲಿ ಅಡಿ ವಿಸ್ತೀರ್ಣ ಇದೆ. ಜನ-ಜಾನುವಾರುಗಳಿಗೆ ಇದೊಂದೇ ನೀರಿನ ಮೂಲ. ಮುಂಗಾರು ಮಳೆಯನ್ನು ಈ ಜಲಾಶಯ ಅವಲಂಬಿಸಿದ್ದು, ಮಳೆ ಕೊರತೆ ಹಿನ್ನೆಲೆಯಲ್ಲಿ 20 ವರ್ಷದವರೆಗೆ ಜಲಾಶಯ ಭರ್ತಿ ಆಗಿರಲಿಲ್ಲ. 2022ರಲ್ಲಿ ಭರ್ತಿಯಾಗಿ ಕೋಡಿ ಹರಿದಿದ್ದು, ಹೆಚ್ಚುವರಿ ನೀರನ್ನು ಬೇರೆ ಕಡೆ ಹರಿಸಲಾಗುತ್ತಿದೆ" ಎಂದು ವಾದ ಮಂಡಿಸಿದರು.
"ಜಲಾಶಯದ ಹೆಚ್ಚುವರಿ ನೀರನ್ನು ಬೇರೆ ಕಡೆ ಹರಿಸಿದರೆ ಸ್ಥಳೀಯರಿಗೆ ತೊಂದರೆ ಉಂಟಾಗಲಿದೆ. ಆದ್ದರಿಂದ ಜಲಾಶಯದ ಹೆಚ್ಚುವರಿ ನೀರು ಬೇರೆ ಕಡೆ ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಈ ಸಂಬಂಧ ಅರ್ಜಿದಾರರು 2024ರ ಫೆ.1ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆಯೂ ನಿರ್ದೇಶನ ನೀಡಬೇಕು" ಎಂದು ಮನವಿ ಮಾಡಿದರು.
ಬೋರನಕಣಿವೆ ಜಲಾಶಯದ ನೀರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗಾಯಿತ್ರಿ ಜಲಾಶಯಕ್ಕೆ ಜಾನುವಾರುಗಳಿಗೆ ಮೇವು ಬೆಳೆಸಲು ಹರಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡದಿದ್ದರೆ ಕಠಿಣ ಕ್ರಮ: ಸಚಿವ ಮಹದೇವಪ್ಪ - Minister H C Mahadevappa