ಬೆಂಗಳೂರು:ಕಲಬುರಗಿ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ 'ಗಾಣಗಾಪುರ ಹಾಗೂ ಗ್ರಾಮದ ಶ್ರೀ ದತ್ತಾತ್ರೇಯ ದೇವಾಲಯಕ್ಕೆ ಅಗತ್ಯ ಮೂಲ ಸೌಕರ್ಯ' ಕಲ್ಪಿಸಲು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ದೇವಾಲಯದ ಆವರಣ ಮತ್ತು ದೇವಾಲಯ ಇರುವ ಗ್ರಾಮ ಗಾಣಗಾಪುರದಲ್ಲಿ ಯಾತ್ರಿಕರಿಗೆ ಮೂಲ ಸೌಕರ್ಯಗಳು ಇಲ್ಲವಾಗಿದೆ ಎಂದು ಆಕ್ಷೇಪಿಸಿ ವಾಸ್ತುಶಿಲ್ಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ. ಶರಣ್ ದೇಸಾಯಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಮಂತ್ರಿಗಳ ಪ್ರಧಾನ ಕಾಯದರ್ಶಿ, ದೇವಸ್ಥಾನದ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಜಿಲ್ಲಾಧಿಕಾರಿ, ರಾಜ್ಯ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆಕ್ಷೇಪವೇನು?:ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿದ್ದು, ಪವಿತ್ರ ಪೂಜಾ ಸ್ಥಳವಾಗಿದೆ. 21 ವರ್ಷಗಳ ಕಾಲ ಗಾಣಗಾಪುರವನ್ನು ಆಳಿದ ನರಸಿಂಹ ಸರಸ್ವತಿ ಅವರ ರೂಪದಲ್ಲಿ ದತ್ತ ಮಹಾರಾಜರು ಪುನರ್ಜನ್ಮ ಪಡೆದಿದ್ದಾರೆ ಎಂಬುದು ಇಲ್ಲಿನ ಜನರ, ಭಕ್ತರ ನಂಬಿಕೆಯಾಗಿದೆ.
ತಾನು(ಅರ್ಜಿದಾರ) 2023ರ ಜ.22 ರಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆದರೆ, ದೇವಸ್ಥಾನದಲ್ಲಿ ಆವರಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಇಲ್ಲ. ದೇವಸ್ಥಾನದ ಅಧಿಕಾರಿಗಳು ಸಹ ಯಾತ್ರಿಕರಿಗೆ ಹೊಸ ವಸತಿ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ಸರ್ಕಾರ ಮಾತ್ರ ಈವರೆಗೂ ವಸತಿ, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಕೈಗೊಂಡಿಲ್ಲ.
ಅಲ್ಲದೆ, ಗಾಣಗಾಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೂ ಅನಾರೋಗ್ಯಕ್ಕೆ ಈಡಾದ ಯಾತ್ರಿಕರಿಗೆ, ಸ್ಥಳೀಯರಿಗೆ, ಹಿರಿಯ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಗಾಣಗಾಪುರ ಗ್ರಾಮದಲ್ಲಿ ಸೂಕ್ತ ಆಡಳಿತ ವ್ಯವಸ್ಥೆಯೇ ಇಲ್ಲ. ಸ್ಥಳೀಯ ಅಧಿಕಾರಿಗಳು, ದೇವಾಲಯ ಆಡಳಿತದ ಅಧಿಕಾರಿಗಳು, ಅರ್ಚಕರು ಮತ್ತು ರಾಜಕೀಯ ನಾಯಕರು ರಾಜ್ಯ ಸರ್ಕಾರವು ದೇವಸ್ಥಾನದ ಅಭಿವೃದ್ಧಿಗೆ ನೀಡಿದ ಅನುದಾನದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಶ್ರೀ ದತ್ತಾತ್ರೇಯ ದೇವಾಸ್ಥಾನದ ಆವರಣ ಮತ್ತು ಗಾಣಗಾಪುರ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಇದರಿಂದ ಗಾಣಗಾಪುರ ಗ್ರಾಮ ಮತ್ತು ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ:ಸರ್ಕಾರಗಳ ಅಧಿಕೃತ ಲಾಂಛನ, ಚಿಹ್ನೆ ದುರ್ಬಳಕೆ ತಡೆ ಕೋರಿ ಅರ್ಜಿ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್