ಬೆಂಗಳೂರು: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರಕೇಶ್ವರಯ್ಯಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಬಳಸದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಅವರ ಹೆಸರನ್ನು ಇವಿಎಂನಿಂದ ತೆಗೆಯಲು ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.
ಹೊಸದುರ್ಗ ತಾಲೂಕಿನ ಗೂಳಿಹಟ್ಟಿಯ ಆರ್.ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂತು.
ಆಗ ಅರ್ಜಿದಾರರು ಮತ್ತು ಚುನಾವಣಾ ಆಯೋಗದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಚುನಾವಣಾ ಪ್ರಕ್ರಿಯೆ ಆರಂಭವಾಗಿರುವಾಗ ಈ ಹಂತದಲ್ಲಿ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ. ಅಲ್ಲದೆ, ಒಮ್ಮೆ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಆ ಕುರಿತ ಯಾವುದೇ ಅರ್ಜಿ ಮಾನ್ಯ ಮಾಡಲಾಗದು. ಅರ್ಜಿದಾರರು ಏನೇ ಇದ್ದರೂ ಚುನಾವಣೆ ನಂತರ ತಕರಾರು ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಆದೇಶಿಸಿದೆ.
ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಶರತ್ ದೊಡ್ಡವಾಡ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಅವರು ಸಲ್ಲಿಸಿದ ಜಾತಿ ಪ್ರಮಾಣ ಪತ್ರ ಆಧರಿಸಿ ನಾಮಪತ್ರ ಸಿಂಧುವಾಗಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿ ದಿವ್ಯಾಂಗರು ಹಾಗೂ ಹಿರಿಯ ನಾಗರಿಕರು ಮತ ಚಲಾವಣೆ ಮಾಡಿದ್ದಾರೆ. ಈ ಹಂತದಲ್ಲಿ ಅವರ ಹೆಸರನ್ನು ಇವಿಎಂನಿಂದ ತೆಗೆಯಲು ಸಾಧ್ಯವಿಲ್ಲ. ಇದನ್ನು ರಿಟ್ ಮೂಲಕ ಪ್ರಶ್ನಿಸಲಾಗದು. ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ ಆನಂತರ ನ್ಯಾಯಾಲಯ ಹಸ್ತಕ್ಷೇಪ ಮಾಡದಂತೆ ಸಂವಿಧಾನದ ಕಲಂ 329(ಬಿ) ಅಡಿ ನಿರ್ಬಂಧವಿದೆ ಎಂದರು.