ಬೆಂಗಳೂರು : ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿರುವ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ನಗರದ ಬಿಳೇಕಳ್ಳಿಯ ನಿವಾಸಿಯಾಗಿರುವ ಚಾರ್ಟ್‌ಡ್ ಅಕೌಂಟೆಂಟ್ ವೃತ್ತಿ ಮಾಡುತ್ತಿರುವ ಗರ್ಭಿಣಿ ಡಾ.ಆರ್. ಅಮೃತಾಲಕ್ಷ್ಮಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಬೆಲೆ ಏರಿಕೆ ಸರ್ಕಾರದ ನೀತಿಯಾಗಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನೆ ಮಾಡುವುದಕ್ಕೆ ಅವಕಾಶವಿಲ್ಲ. ಬೆಲೆ ಏರಿಕೆ ಮೂಲಭೂತವಾಗಿ ಸರ್ಕಾರದ ನೀತಿ ನಿರೂಪಣೆ ವ್ಯಾಪ್ತಿಯಲ್ಲಿದೆ. ಹೀಗಾಗಿ ಶಾಸನ ಬದ್ಧವಾದ ಉಲ್ಲಂಘನೆಯಾಗಿರುವ ಸಂಬಂಧ ಸ್ಪಷ್ಟವಾಗಿಲ್ಲವಾದಲ್ಲಿ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿರುವುದಿಲ್ಲ. ಅಲ್ಲದೇ, ಹಾಲಿನ ದರ ಏರಿಕೆ ಮಾಡಿರುವ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ವಾಣಿಜ್ಯ ಉದ್ದೇಶದಿಂದ ತಜ್ಞ ನಿರ್ಧಾರವಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬೆಲೆ ಏರಿಕೆಯ ಬಳಿಕ 43 ರೂ.ಗಳಿಂದ ರಿಂದ 57 ರೂ. ಗಳಿಗೆ ಹೆಚ್ಚಳವಾಗಿದೆ. 50 ಎಂಎಲ್ ಹಾಲು ಹೆಚ್ಚಳವಾಗಿ ನೀಡುತ್ತಿರುವುದರಿಂದ 2 ರೂ.ಗಳ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ. ಒಂದು ಲೀಟರ್‌ಗೆ 40 ರೂ. ಗಳು ಹೆಚ್ಚಳವಾಗಲಿದೆ. ಅಲ್ಲದೇ, ಬೆಲೆ ಹೆಚ್ಚಳದ ಬಳಿಕ ಅರ್ಧ ಲೀಟರ್ ಪಾಕೇಟ್ ಜತೆ ಶೇ.10 ರಷ್ಟು ಹಾಗೂ 1 ಲೀಟರ್ ಹಾಲಿನ ಜತೆಗೆ ಶೇ.5 ರಷ್ಟು ಮಾತ್ರ ಹೆಚ್ಚಳ ಹಾಲು ಲಭ್ಯವಾಗಲಿದೆ ಎಂದು ವಿವರಿಸಿದರು.
ನಂದಿನ ಹಾಲಿನಲ್ಲಿ ಹಲವು ರೀತಿಯ ಗುಣಮಟ್ಟ ಹೊಂದಿರುವ ಪಾಕೆಟ್‌ಗಳನ್ನು ಸಿದ್ದಪಡಿಸಲಾಗಿದೆ. ಇದರಲ್ಲಿ ಹೆಚ್ಚು ಗುಣಮಟ್ಟದ ಹಾಲಿಗೂ 50 ಎಂಎಲ್‌ಗೆ 2 ರೂ., ಕಡಿಮೆ ಗುಣಮಟ್ಟದ ಹಾಲಿಗೂ 50 ಎಂಎಲ್‌ಗೆ 2 ರೂ. ಗಳನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಹೆಚ್ಚಿನ ಪ್ರಮಾಣದ ಬಡ ಜನತೆ ಕಡಿಮೆ ಗುಣಮಟ್ಟದ ಹಾಲನ್ನು ಖರೀದಿ ಮಾಡುತ್ತಾರೆ. ಇದು ವಾಣಿಜ್ಯ ಕೌಶಲ್ಯದ ನಿಯಮಗಳಿಗೆ ವಿರುದ್ಧವಾಗಿದೆ. ಜತೆಗೆ, ಸಂವಿಧಾನದ ಪರಿಚ್ಚೇದ 14(ಸಮಾನತೆ)ಗೆ ವಿರುದ್ಧವಾಗಿದೆ. ಅಲ್ಲದೇ, 99 ಲಕ್ಷ ಲೀಟರ್ ಹಾಲು ಮಾರಾಟವಾಗಲಿದೆ ಎಂದು ಕೆಎಂಎಫ್ ತಿಳಿಸಿದೆ. ಅದರಲ್ಲಿ 500 ಎಂ.ಎಲ್ ಹಾಗೂ 1 ಲೀಟರ್ ಬೆಲೆ 2 ರೂ.ಗಳಂತೆ ಪ್ರತಿ ದಿನ 1.98 ಕೋಟಿ, ವರ್ಷಕ್ಕೆ 722 ಕೋಟಿ ರೂ.ಗಳ ಹೆಚ್ಚಳವಾಗಲಿದೆ ಎಂದು ಪೀಠಕ್ಕೆ ತಿಳಿಸಿದರು. ಜತೆಗೆ, ದೇಶದ ಯಾವುದೆ ಹಾಲು ಒಕ್ಕೂಟ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಿರುವ ಸರ್ಕಾರದ ಕ್ರಮವನ್ನು ರದ್ದಪಡಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಕೆಎಂಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕೋಟಿ ಲೀಟರ್ ದಾಟಿದ ಹಾಲಿನ ಸಂಗ್ರಹಣೆ: ಸಿಎಂ ಹರ್ಷ - KMF Milk Collection record