ಹಾವೇರಿ: ಇತ್ತೀಚೆಗೆ ನಿಧನ ಹೊಂದಿದ ತಬಲಾವಾದಕ ಉಸ್ತಾದ್ ಜಾಕಿರ್ ಹುಸೇನ್ ಅವರಿಗೆ ಹಾವೇರಿಯ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕರಿಯಪ್ಪ ಹಂಚಿನಮನಿ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕ್ಯಾನ್ವಾಸ್ ಮೇಲೆ ಆರ್ಕಾಲಿಕ್ ಪೈಂಟಿಂಗ್ನಲ್ಲಿ ಜಾಕಿರ್ ಹುಸೇನ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ.
ಭಾರತದ ಖ್ಯಾತ ತಬಲವಾದಕ ಉಸ್ತಾದ್ ಜಾಕಿರ್ ಹುಸೇನ್ ಅವರು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಭಾನುವಾರ ನಿಧನ ಹೊಂದಿದರು. ಸಂಗೀತ ಲೋಕದ ನಕ್ಷತ್ರಕ್ಕೆ ಹಲವು ದಿಗ್ಗಜರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಅಗಲಿದ ತಬಲಾ ವಾದಕನಿಗೆ ಕ್ಯಾನ್ವಾಸ್ ಮೇಲೆ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರ ಕಲಾವಿದ (ETV Bharat) ಚಿತ್ರ ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, "ಉಸ್ತಾದ್ ಜಾಕಿರ್ ಹುಸೇನ್ ಅವರ ತಬಲಾ ವಾದನವನ್ನು ಕೇಳಿಕೊಂಡೇ ಬೆಳೆದವರು ನಾವು. ಅವರ ತಬಲಾ ವಾದನ ಅವರ ಅಭಿಮಾನಿಯನ್ನಾಗಿ ಮಾಡಿತ್ತು. ಬದುಕಿನಲ್ಲಿ ಜಂಜಾಟ, ಒತ್ತಡಗಳು ಬಂದಾಗ ಜಾಕಿರ್ ಹುಸೇನ್ ಅವರ ತಬಲಾ ವಾದನ ಕೇಳಿದರೆ ಸಾಕು, ಏನೋ ಒಂಂಥರಾ ನೆಮ್ಮದಿ. ತಬಲಾ ವಾದನದಲ್ಲಿ ಅವರನ್ನು ಮೀರಿಸುವ ಕಲಾವಿದರಿಲ್ಲ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ" ಎಂದು ಕರಿಯಪ್ಪ ಹಂಚಿನಮನಿ ಅಭಿಪ್ರಾಯಪಟ್ಟಿದ್ದಾರೆ.
"ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ದೇಶದ ಹಲವು ಉನ್ನತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಒಂದೇ ಸಮಯದಲ್ಲಿ ಏಳು ತಬಲಾಗಳನ್ನು ನುಡಿಸುವ ಶಕ್ತಿ ಅವರಿಗಿತ್ತು. ತಬಲಾ ವಾದನದ ವೇಳೆ ಅವರ ಕೈಗಳ ಚಲನೆಯನ್ನು ಕ್ಯಾಮರಾದಲ್ಲಿ ಸಹ ಸ್ಪಷ್ಟವಾಗಿ ಚಿತ್ರಿಸಲಾಗುತ್ತಿರಲಿಲ್ಲ. ಅಂತಹ ಮಹಾನ್ ಕಲಾವಿದ ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಉಸ್ತಾದ್ ಜಾಕಿರ್ ಹುಸೇನ್ ಅವರ ಪೈಂಟಿಂಗ್ (ETV Bharat) ಇದೇ ವೇಳೆ ಮಾತನಾಡಿದ ಸಾಹಿತಿ ಸತೀಶ್ ಕುಲಕರ್ಣಿ, "ಹಲವು ದಿಗ್ಗಜ ಕಲಾವಿದರಲ್ಲಿ ಒಬ್ಬರಾಗಿದ್ದ ಜಾಕಿರ್ ಹುಸೇನ್ ನಿಧನವಾಗಿದ್ದು ಸಂಗೀತಲೋಕಕ್ಕೆ ತುಂಬಲಾರದ ನಷ್ಟ. ಅಂತಹ ಮಹಾನ್ ಕಲಾವಿದನ ನಿಧನಕ್ಕೆ ಹಾವೇರಿ ಅಂತಾರಾಷ್ಟ್ರೀಯ ಕಲಾವಿದ ಕರಿಯಪ್ಪ ಹಂಚಿನಮನಿ ಚಿತ್ರ ರಚಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು ಅರ್ಥಪೂರ್ಣವಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಸಂಗೀತ ಲೋಕದ ಪ್ರಕಾಶಮಾನ ನಕ್ಷತ್ರ ಮರೆ: ಜಾಕಿರ್ ಹುಸೇನ್ ನಿಧನಕ್ಕೆ ಪಂಡಿತ್ ರೋನು ಮಜುಮ್ದಾರ್ ಕಂಬನಿ