ಕರ್ನಾಟಕ

karnataka

ETV Bharat / state

6 ಗುಂಟೆ ಜಾಗದಲ್ಲಿ ಕೈತೋಟ, ಪರಿಸರ ಜಾಗೃತಿ: ನಿವೃತ್ತಿ ಬಳಿಕವೂ ವಿಶ್ರಮಿಸದ ಯೋಧ! - RETIRED SOLDIER SERVICE

61 ವರ್ಷದ ಯೋಧರೊಬ್ಬರು ನಿವೃತ್ತಿ ಬಳಿಕವೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಕೈತೋಟದ ಮೂಲಕ ಪರಿಸರ ಜಾಗೃತಿ ಜೊತೆಗೆ ಹಲವು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿ ಆಗುತ್ತಿದ್ದಾರೆ. ಹಾವೇರಿ ಪ್ರತಿನಿಧಿ ಶಿವಕುಮಾರ್ ನೀಡಿರುವ ವಿಶೇಷ ವರದಿ ಇಲ್ಲಿದೆ.

ಕೈ ತೋಟದಲ್ಲಿ ನಿವೃತ್ತ ಯೋಧ
ಕೈ ತೋಟದಲ್ಲಿ ನಿವೃತ್ತ ಯೋಧ (ETV Bharat)

By ETV Bharat Karnataka Team

Published : Jan 20, 2025, 10:11 AM IST

Updated : Jan 20, 2025, 10:25 AM IST

ಹಾವೇರಿ: ಇಂದಿನ ಆಹಾರ ಪದ್ಧತಿ, ಒತ್ತಡದ ಜೀವನದಲ್ಲಿ 40ರ ಹರೆಯದಲ್ಲೇ ಶಕ್ತಿ ಕುಂದಿ ಹಲವು ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ನಿವೃತ್ತಿ ವೇಳೆಗೆ ಮಧುಮೇಹ, ರಕ್ತದೋತ್ತಡ, ಸ್ನಾಯುಸೆಳೆತದಿಂದ ಬಳಲುವವರೇ ಅಧಿಕ. ಆದರೆ, ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಿವೃತ್ತ ಯೋಧರೊಬ್ಬರು ಪರಿಸರ ಕಾಳಜಿ, ಸಾಮಾಜಿಕ ಕೆಲಸ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಇವರ ಹೆಸರು ಎಂ.ಡಿ.ಚಿಕಣ್ಣನವರ. ವಯಸ್ಸು 61. 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಳಿಕ 16 ವರ್ಷ ರಾಜ್ಯ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ವಿಶಿಷ್ಟ ಹವ್ಯಾಸವೆಂದರೆ ಪರಿಸರ ಪ್ರೇಮ. ತಮ್ಮ ಮನೆಯ ಸುತ್ತ ಕೈತೋಟದಲ್ಲಿ ನೂರಾರು ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸಿರುವ ಇವರು, ಈ ಪರಿಸರಕ್ಕೆ ನಾವು ಏನಾದರೂ ನೀಡಬೇಕು ಎನ್ನುವುದು ಇವರ ಧ್ಯೇಯ.

ಕೈ ತೋಟದಲ್ಲಿ ನಿವೃತ್ತ ಯೋಧ (ETV Bharat)

ಆರು ಗುಂಟೆ ಜಾಗದಲ್ಲಿ ತರಕಾರಿ, ಫಲ ಪುಷ್ಪ ಸಸಿಗಳು:ಆರು ಗುಂಟೆ ಜಾಗದಲ್ಲಿ ತೆಂಗು, ಮಾವು, ಬೇವು, ಹತ್ತಿ, ಸಾಗವಾನಿ, ಕರಬೇವು ಮತ್ತು ಅಡಕೆ ಗಿಡ ಹಚ್ಚಿದ್ದಾರೆ. ಅಷ್ಟೇ ಅಲ್ಲ ಜೊತೆಗೆ ನಮ್ಮ ನೆಲದಲ್ಲಿ ಬೆಳೆಯಲಾರದ ಗಿಡಗಳನ್ನು ಕೂಡ ಚಿಕ್ಕಣ್ಣ ಬೆಳೆಸಿದ್ದಾರೆ. ರುದ್ರಾಕ್ಷಿ ಏಲಕ್ಕಿ, ಲವಂಗ, ದಾಲ್ಚಿನ್ನಿ, ಸೀತಾಫಲ, ರಾಮಫಲ ಥೈವಾನ್ ಮಾವು, ಅಂಜೂರು ಮತ್ತು ಅರಿಶಿನ, ಬಾಳೆ, ಸೇಬು, ಮೋಸಂಬಿ, ಕಿತ್ತಳೆಯೂ ಇಲ್ಲಿದೆ.

ಹತ್ತಾರು ಬಗೆಯ ದಾಸವಾಳ, ಗುಲಾಬಿ, ಮೇಪ್ಲವರ್ ಬ್ರಹ್ಮಕಮಲ ಸೇರಿದಂತೆ ಹಲವು ಬಗೆಯ ಹೂಗಳನ್ನು ಬೆಳೆದಿದ್ದಾರೆ. ಹಾಗೆಯೇ ತಮಗೆ ಬೇಕಾದ ತರಕಾರಿಯನ್ನೂ ಇಲ್ಲೇ ಬೆಳೆಯುವುದು ವಿಶೇಷ. ಇವರು ಯಾವುದೇ ರಾಸಾಯನಿಕ ಗೊಬ್ಬರ ಬಳಸಲ್ಲ. ಬದಲಾಗಿ ಕೃಷಿ ವಿವಿಯಲ್ಲಿ ಸಿಗುವ ಜೈವಿಕ ಗೊಬ್ಬರ ಮಾತ್ರ ಉಪಯೋಗಿಸುತ್ತಾರೆ.

ಕೈ ತೋಟದಲ್ಲಿ ನಿವೃತ್ತ ಯೋಧ (ETV Bharat)

ಸಮಾಜ ಸೇವೆ: ಯೋಧರಾಗುವ ಕುರಿತಂತೆ ತರಬೇತಿ ನೀಡುವ ಇವರು 200 ಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಜೊತೆಗೆ ಸಮಾಜದಲ್ಲಿ ಬಡವರಿಗಾಗಿ ದನಿ, ನಿರಾಶ್ರಿತರಿಗೆ ನಿವೇಶನ ದೊರಕಿಸಲು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಿ ಇಲಾಖೆಯ ಸಹಸ್ರಾರು ಗ್ಯಾಲನ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಸ್ವಚ್ಛ, ಗ್ರಾಮಗಳಲ್ಲಿ ಜಲ ಸಂಬಂಧಿತ ರೋಗಗಳು ಕಾಣಿಸಿಕೊಂಡು ನಿಯಂತ್ರಣಕ್ಕೆ ಬರದಿದ್ದಾಗ ಜಲಾಗಾರಗಳನ್ನು ಶುದ್ಧಗೊಳಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ಭ್ರಷ್ಟಾಚಾರ ವಿರೋಧಿ ಜನ ಆಂದೋಲನದಲ್ಲಿಯೂ ತೊಡಗಿಸಿಕೊಂಡಿರುವ ಇವರು ಅಣ್ಣಾ ಹಜಾರೆ ಅವರನ್ನ ಬ್ಯಾಡಗಿಗೆ ಕರೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಪ್ರಾಣಿಪಕ್ಷಿಗಳಿಗೆ ನೀರು ಆಹಾರ ಕೊರತೆಯಾಗದಂತೆ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಆಹಾರ ನೀರು ಇಡುತ್ತಾರೆ.

ನಿವೃತ್ತ ಯೋಧನ ಕೈ ತೋಟ (ETV Bharat)

ಮನುಷ್ಯನಾಗಿ ಭೂಮಿಗೆ ಬಂದಿದ್ದೇವೆ. ಏನಾದರೂ ಒಳಿತು ಮಾಡಬೇಕು. ಪರಿಸರ ಬಗ್ಗೆ ಸಂದೇಶ ನೀಡುವುದಕ್ಕೆ ನಮ್ಮ 6 ಗುಂಟೆ ಜಾಗದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಬಹಳಷ್ಟು ಗಡಿ ಮರಗಳನ್ನು ಬೆಳೆಸಿದ್ದೇನೆ. ಆ ಮರಗಳು ಈಗ ಫಲ ಕೊಡುತ್ತಿವೆ. ಇನ್ನು ಪ್ರತಿಯೊಬ್ಬರು ಭ್ರಷ್ಟಾಚಾರವನ್ನು ವಿರೋಧಿಸಬೇಕು. ಲಂಚ ಕೇಳುವುದು, ಕೊಡುವುದು ಅಪರಾಧ ಎನ್ನುತ್ತಾರೆ ಚಿಕ್ಕಣ್ಣನವರ್.

ಇದನ್ನೂ ಓದಿ:ರೈತ ಉತ್ಪಾದಕ ಸಂಸ್ಥೆಯಿಂದ ಅನ್ನದಾತರಿಗೆ ಮಿಶ್ರ ಬೇಸಾಯದ ತರಬೇತಿ ; ನಿತ್ಯ ಆದಾಯಕ್ಕೆ ಆಸರೆ

ಇದನ್ನೂ ಓದಿ: ನಾವೀನ್ಯತೆ ಮೂಲಕ ಮಹಾನ್​ ಕ್ರಾಂತಿ ಮಾಡಿದ ಯುವ ರೈತ; ಹಲವು ಅನ್ನದಾತರಿಗೆ ಮಾದರಿ ವೆಂಕಟೇಶ್​

Last Updated : Jan 20, 2025, 10:25 AM IST

ABOUT THE AUTHOR

...view details