ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಕ್ಕೆ ಮುಜುಗರವಾಗುತ್ತಿದ್ದು, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಬೇಕು ಎಂದು ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದಿರುವ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್, 'ನಾನು ತುಂಬಾ ಕಿರಿಯ. ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ. ಕೆಲವು ದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ತುಣುಕುಗಳಿಂದ ಪಕ್ಷಕ್ಕೆ ತೀರಾ ಮುಜುಗರ ಉಂಟಾಗಿದೆ. ಈ ವಿಡಿಯೋ ದೃಶ್ಯಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರೆಂಬ ಭಾವನೆ ಉಂಟಾಗಿದೆ. ಹಾಗಾಗಿ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ' ಎಂದು ಮನವಿ ಮಾಡಿದ್ದಾರೆ.
'ತಾವು ಆರು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬರುತ್ತಿರುವ ರಾಜಕೀಯ ಜೀವನ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ತತ್ವ-ಸಿದ್ಧಾಂತಗಳ ಬುನಾದಿಯ ಮೇಲೆ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ್ದೀರಿ. ರಾಷ್ಟ್ರದ ಮೊದಲ ಕನ್ನಡಿಗ ಎಂಬ ಅಭಿದಾನ ತಮ್ಮದು. ಮಣ್ಣಿನ ಮಗನಾಗಿ ರೈತ ಜನಾಂಗದ ಏಳಿಗೆಗಾಗಿ ಸದಾ ಮಿಡಿಯುವ ನೇತರಾರರು ತಾವಾಗಿದ್ದೀರಿ. ಅದರಲ್ಲಿಯೂ "ಹೆಣ್ಣು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ" ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನು ಗೌರವಾದರಗಳಿಂದ ನೋಡಿಕೊಂಡು ಬಂದಿದ್ದೀರಿ. ತಮ್ಮ ಪರಂಪರೆಯಲ್ಲಿ ಕುಮಾರಣ್ಣ ಅವರು ಮುಖ್ಯಮಂತ್ರಿಯಾದಾಗ ಲಾಟರಿ ನಿಷೇದ ಮಾಡಿ, ಕನ್ನಡ ನಾಡಿನ ಹೆಣ್ಣು ಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದಾರೆ. ಸೈಕಲ್ ಭಾಗ್ಯವನ್ನು ಕರುಣಿಸಿ ಹೆಣ್ಣು ಹುಡುಗಿಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಾತ್ಯಾತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದೀರಿ, ತಮ್ಮ ಪಕ್ಷದ ಚಿಹ್ನೆಯು ಭತ್ತ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನು ಇದು ಪ್ರತಿನಿಧಿಸುತ್ತದೆಂದು ಎಲ್ಲರೂ ಭಾವಿಸಿದ್ದಾರೆ'.
'ನಮ್ಮದು ಪ್ರಾದೇಶಿಕ ಪಕ್ಷ. ತಾವು ರಾಷ್ಟ್ರ ಕಂಡ ಮಹಾ ಮುತ್ಸದ್ದಿ, ಅಂತೆಯೇ ಬಿಜೆಪಿ ರಾಷ್ಟ್ರೀಯ ಪಕ್ಷವಾದರೂ ನಮ್ಮೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಿಮ್ಮ ಮಹತ್ವವನ್ನು ಎತ್ತಿತೋರಿಸುತ್ತದೆ. ಈ ಪರಂಪರೆಯನ್ನು ಹೊಂದಿರುವ ಪಕ್ಷಕ್ಕೆ ವಿಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ಈಗಾಗಲೇ ಸರ್ಕಾರದವರು ಈ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ್ದಾರೆ. ದಯವಿಟ್ಟು ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚನೆ ಮಾಡಿ, ಆ ಸಮಿತಿ ವಿಡಿಯೋ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ಗೊತ್ತು ಮಾಡುವಂತಾಗಲಿ, ಅಲ್ಲಿಯವರೆಗೆ ಪಕ್ಷದ ಮುಜುಗರವನ್ನು ತಪ್ಪಿಸಲು ಮತ್ತು ಎರಡನೇ ಹಂತದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲು ಕೂಡಲೇ ಸಂಸದರಾದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ತಮ್ಮಲ್ಲಿ ಕೋರುತ್ತೇನೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ನಾಯಕ ಮಂಜುನಾಥ್ ಟ್ವೀಟ್ ಶಾಸಕ ಸಮೃದ್ಧಿ ಮಂಜುನಾಥ್ ಟ್ವೀಟ್: 'ಇತ್ತಿಚಿನ ದಿನಗಳಲ್ಲಿ 'ಹಾಸನದ ಪ್ರಕರಣ' ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜ್ಯದೆಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೇ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತಹ ಸ್ಥಿತಿ ತಲುಪಿದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದ ದಯನೀಯ ಪರಿಸ್ಥಿತಿ ಮೊದಲ ಬಾರಿಗೆ ಶಾಸಕನಾಗಿರುವ ನನಗೆ ಎದುರಾಗುತ್ತಿದೆ. ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿಯೇನು ಯೋಚಿಸಿ?. ಹೆಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಣ್ಣ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದ್ದಾರೆ
ಜೆಡಿಎಸ್ ನಾಯಕ ಮಂಜುನಾಥ್ ಟ್ವೀಟ್ '19 ಜನ ಶಾಸಕರ ಭವಿಷ್ಯ ಬೇಕೋ, ತಮ್ಮ ಕುಟುಂಬದ ರೇವಣ್ಣರವರು, ಪ್ರಜ್ವಲ್ ಅವರು ಮುಖ್ಯವೋ ಎಂಬುದನ್ನು ತೀರ್ಮಾನಿಸಬೇಕಿದೆ. 24 ಗಂಟೆಗಳಲ್ಲಿ ಆರೋಪ ಬಂದಿರುವ ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ಸಿದ್ಧಂತಗಳನ್ನು ಉಳಿಸಿ. ಕಾರ್ಯಕರ್ತರನ್ನು ಮತ್ತು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ' ಎಂದು ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ:ಪೆನ್ಡ್ರೈವ್ ವಿಡಿಯೋ ಪ್ರಕರಣ, ಪ್ರಜ್ವಲ್ ರೇವಣ್ಣ ಅಮಾನತು ವಿಚಾರ; ಕುಮಾರಸ್ವಾಮಿ ಹೇಳಿದ್ದೇನು? - H D Kumaraswamy