ಕರ್ನಾಟಕ

karnataka

ETV Bharat / state

ಪ್ರಜ್ವಲ್ ರೇವಣ್ಣ ಪ್ರಕರಣ: ಆರೋಪಿಗಳಿಗೆ ಜಾಮೀನು ನೀಡದಂತೆ ಸರ್ಕಾರದ ವಾದ - Prajwal Revanna

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡದಂತೆ ಸರ್ಕಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದೆ.

High Court
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 5, 2024, 9:56 PM IST

ಬೆಂಗಳೂರು: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿನ ಅರ್ಜಿದಾರ ಆರೋಪಿಗಳೆಲ್ಲರೂ ಒಂದಲ್ಲೊಂದು ರೀತಿಯಲ್ಲಿ ರಕ್ತ ಸಂಬಂಧಿಗಳಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರೂ ರಾಜಕೀಯವಾಗಿ ಒಂದಲ್ಲೊಂದು ಸ್ಥಾನಮಾನ ಹೊಂದಿದವರೇ ಆಗಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿದಲ್ಲಿ ಪ್ರಕರಣದ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಪ್ರಕರಣದ ಆರೋಪಿಗಳಾಗಿರುವ ಸತೀಶ್ ಬಾಬಣ್ಣ, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು, ಎಸ್.ಟಿ.ಕೀರ್ತಿ, ಹೆಚ್.ಡಿ.ಮಾಯು ಗೌಡ, ಕೆ.ಎ.ರಾಜಗೋಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಇದೇ ವೇಳೆ ಹೆಚ್.ಡಿ.ರೇವಣ್ಣ ಜಾಮೀನು ರದ್ದತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕಾಯ್ದಿರಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಮೊದಲ ಆರೋಪಿ ಹೆಚ್.ಡಿ.ರೇವಣ್ಣ ಮತ್ತು ಎಂಟನೇ ಆರೋಪಿ ಭವಾನಿ ರೇವಣ್ಣಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಈ ಎಲ್ಲಾ ಆರೋಪಿಗಳು ರೇವಣ್ಣ, ಭವಾನಿ ಸೂಚನೆಯಂತೆ ನಡೆದುಕೊಂಡಿದ್ದಾರೆ. ಎಲ್ಲರೂ ತನಿಖೆಗೆ ಸಹಕರಿಸಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಫಾರ್ಮ್ ಹೌಸ್ ಮಾಲೀಕ ರಾಜಗೋಪಾಲ ಪರವಾಗಿ ವಾದಿಸಿದ ವಕೀಲರು, ಅರ್ಜಿದಾರರು ರಾಜಗೋಪಾಲ ಆರು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಮೊಬೈಲ್ ಫೋನ್ ಅನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 71 ವರ್ಷದ ರಾಜಗೋಪಾಲ ಅವರಿಗೆ ಕಾಲು ಬದಲಿ (ಆಂಪ್ಯೂಟ್) ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಯಾವುದೇ ರೀತಿಯಲ್ಲಿಯೂ ಅವರಿಗೆ ಐಪಿಸಿ ಸೆಕ್ಷನ್ 364ಎ(ಅಪಹರಣ) ಅನ್ವಯಿಸುವುದಿಲ್ಲ. ವಿಚಾರಣೆ ಮುಗಿದಿದ್ದು, ಆರೋಪ ಪಟ್ಟಿಯನ್ನೂ ಪ್ರಾಸಿಕ್ಯೂಷನ್ ಸಲ್ಲಿಸಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ವಾದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್, ''ಇದೊಂದು ಸಂಘಟಿತ ಅಪರಾಧವಾಗಿದ್ದು, ಹೊಳೆನರಸೀಪುರದಲ್ಲಿ ಎಫ್ಐಆರ್ ದಾಖಲಾಗಿ, ರಾಜ್ಯ ಸರ್ಕಾರವು ಏಪ್ರಿಲ್ 28ರಂದು ವಿಶೇಷ ತನಿಖಾ ದಳ ರಚನೆಯಾಗುತ್ತಿದ್ದಂತೆ ಪ್ರಕರಣದಲ್ಲಿ ಆರೋಪಿಗಳ ಗುಂಪು ಸಕ್ರಿಯವಾಗಿ ಸಂತ್ರಸ್ತೆಯನ್ನು ಅಪಹರಿಸಿದೆ. ಇಡೀ ಅಪರಾಧ ಚಟುವಟಿಕೆಗೆ ಸಂಬಂಧಿಸಿದ ಕರೆ ದಾಖಲೆ, ಹೇಳಿಕೆಗಳನ್ನು ಸಲ್ಲಿಸಲಾಗಿದೆ" ಎಂದರು.

"ಅರ್ಜಿದಾರ/ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರೇವಣ್ಣ-ಭವಾನಿ ದಂಪತಿಯ ಸಂಬಂಧಿಗಳಾಗಿದ್ದಾರೆ. ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದ್ದು, ರಾಜಕೀಯ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದರು. ಸಂತ್ರಸ್ತೆ ಅಪಹರಣದ ಬಗ್ಗೆ ಆಕೆಯ ಪುತ್ರ ದೂರು ನೀಡುತ್ತಿದ್ದಂತೆ ಆಕೆಯಿಂದಲೇ ಅಪಹರಣವಾಗಿಲ್ಲ ಎಂಬ ವಿಡಿಯೊ ಹೇಳಿಕೆಯನ್ನು ಆರೋಪಿಗಳು ಬಿಡುಗಡೆ ಮಾಡಿಸಿದ್ದಾರೆ".

"ಇದೆಲ್ಲಕ್ಕೂ ಮಿಗಿಲಾಗಿ, ಅಪಹರಣದ ವಿಚಾರ ತಿಳಿಯುತ್ತಿದ್ದಂತೆಯೇ ಎಲ್ಲಾ ಆರೋಪಿಗಳು ಸಂತ್ರಸ್ತೆಯನ್ನು ಮತ್ತೊಂದು ಸ್ಥಳದಲ್ಲಿ ಒತ್ತೆ ಇಡಲು ಯತ್ನಿಸಿದ್ದರು ಎಂಬ ವಿಚಾರ ಕರೆ ದಾಖಲೆಗಳಿಂದ ತಿಳಿದು ಬಂದಿದೆ. ಸಂತ್ರಸ್ತೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲು ಪ್ರತ್ಯೇಕ ವಾಹನಗಳನ್ನು ಬಳಕೆ ಮಾಡಲಾಗಿದೆ" ಎಂದರು.

"ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಎಂಟನೇ ಆರೋಪಿಯು ತನ್ನ ಕಾರಿನ ಡ್ರೈವರ್ ಮೂಲಕ ಅಪಹರಣ ಷಡ್ಯಂತ್ರ ರೂಪಿಸಿದ್ದಾರೆ. ಇದುವರೆಗೂ ಕಾರಿನ ಡ್ರೈವರ್ ಎಲ್ಲಿದ್ದಾನೆ ಎಂದು ಪತ್ತೆಯಾಗಿಲ್ಲ. ರಾಜಗೋಪಾಲ್ ಮೊಬೈಲ್​ನಿಂದ ಸರಿಸುಮಾರು 40 ಸಾವಿರ ಕರೆ ಮಾಡಲಾಗಿದೆ. ಇದೆಲ್ಲವೂ ಆರೋಪಿಗಳ ನಡುವಿನ ಪಿತೂರಿಯ ಭಾಗವೇ ಆಗಿದೆ" ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ:ಕೋರ್ಟ್​ ನಿರ್ಬಂಧವಿಲ್ಲದಿದ್ದರೆ ತಾಯಿಯೊಂದಿಗಿದ್ದ ಮಗುವನ್ನು ತಂದೆ ಕರೆದೊಯ್ದರೆ ಅಪಹರಣವಾಗಲ್ಲ: ಹೈಕೋರ್ಟ್ - high court

ABOUT THE AUTHOR

...view details