ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿದರು. ಬೆಂಗಳೂರು:''ರಾಜ್ಯ ಸರ್ಕಾರ ಜನರಿಗೆ ತಂದಿರುವ ಐದು ಗ್ಯಾರಂಟಿಗಳ ಜೊತೆಗೆ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಹಾಗೂ ಪ್ರತಿ ವ್ಯಕ್ತಿಗೂ ಉಚಿತ ಆರೋಗ್ಯದ ಗ್ಯಾರಂಟಿಯನ್ನು ಕೊಡಬೇಕು. ಆರ್ಥಿಕ ಶಿಸ್ತು ತರುವ ಕಾರಣಕ್ಕೆ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ನಿರ್ವಹಿಸದೆ, ಆರ್ಥಿಕ ಇಲಾಖೆ ಮುನ್ನಡೆಸಲು ಬೇರೆಯವರನ್ನು ನೇಮಿಸಬೇಕು'' ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.
ಪರಿಷತ್ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಪರಿಸ್ಥಿತಿ ಕೈಮೀರಿ ಹೋಗಲು ನಾವೇ ಕಾರಣರಾಗುತ್ತಿದ್ದೇವೆ. ಇಲ್ಲಿ ಯಾರೂ ವೈರಿಗಳಿಲ್ಲ, ಇಲ್ಲಿ ಮೂರ್ನಾಲ್ಕು ದಿನದಿಂದ ನಡೆಯುತ್ತಿರುವ ವಿದ್ಯಮಾನ ನೋಡಿದರೆ ಎಲ್ಲವನ್ನು ನಾವು ಮರೆತು ಬಿಟ್ಟಿದ್ದೇವೆ. ಗಾಂಧಿಯನ್ನೂ ಮರೆತಿದ್ದೇವೆ'' ಎಂದು ಈಶ್ವರ ಅಲ್ಲಾ ತೇರೆನಾಮ್ ಉಲ್ಲೇಖಿಸಿ ಪ್ರತಿಪಕ್ಷಗಳ ನಡೆಯನ್ನು ಟೀಕಿಸಿದರು.
''ಸಂವಿಧಾನ ಓದು ಮತ್ತು ತಿಳುವಳಿಕೆ ಕೊಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಇಂದು ಶ್ರೀರಾಮ, ರಹೀಮ್ ಸೇರಿದಂತೆ ದೇವರ ಹೆಸರು ಹೇಳುವ ಅಧಿಕಾರವನ್ನು ಸಂವಿಧಾನ ಕೊಟ್ಟಿದೆ. ಇದನ್ನು ಯಾರೋ ವ್ಯಕ್ತಿ, ಪಕ್ಷ ಕೊಟ್ಟಿದ್ದಲ್ಲ, ಇಂತಹ ಸಂವಿಧಾನ ಮರೆತು ನಾವು ಯಾವ ಸಂಬಂಧ ಕಟ್ಟಲು ಸಾಧ್ಯ? ನಮ್ಮನ್ನು ನಾವು ಅರ್ಥೈಸಿಕೊಳ್ಳದೆ, ಆಡಳಿತ ನಡೆಸುತ್ತಿರುವುದು ದುರ್ದೈವದ ಸಂಗತಿಯಾಗಿದೆ'' ಎಂದು ಪ್ರಸ್ತುತ ವಿದ್ಯಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದರು.
ಜಯಂತಿಗಳ ಆಚರಣೆ ಪರಿಷ್ಕರಿಸಿ:''ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಲಾಗಿದೆ. ನಮ್ಮೆಲ್ಲ ಧರ್ಮಾಧಿಕಾರಿಗಳು ಸಾಂಸ್ಕೃತಿಕ ರಾಯಭಾರಿಗಳೇ, ಎಲ್ಲ ಮಠಗಳೂ ಸಾಂಸ್ಕೃತಿಕ ಕೇಂದ್ರಗಳೇ. ಆದರೆ, ಅವನ್ನು ನಾವು ಜಾತಿಗೆ ಸೀಮಿತಗೊಳಿಸಿದ್ದೇವೆ. ಇದನ್ನು ಸಂವಿಧಾನದ ಮೂಲಕ ಸರಿ ಮಾಡಬೇಕಿದೆ. ಹಾಗಾಗಿ, ಸರ್ಕಾರ ಎಲ್ಲರ ಜಯಂತಿ ಮಾಡುವುದನ್ನು ಪರಿಷ್ಕರಣೆ ಮಾಡಬೇಕು. 36 ಜಯಂತಿ ಮಾಡುತ್ತಿದ್ದೇವೆ, ಇದಕ್ಕೆ 72 ದಿನ ಹೋಯಿತು. ಭಾನುವಾರ, ಹಬ್ಬಹರಿದಿನ ಹಾಗೂ ಗಣ್ಯರ ನಿಧನ, ಹೀಗೆ ಎಷ್ಟು ದಿನ ಹೋಗಲಿದೆ. ಇದರಿಂದ ಎಂತಹ ಆಡಳಿತ ನೀಡಲು ಸಾಧ್ಯ? ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ, ಗಾಂಧಿ ಜಯಂತಿ ಮಾಡಿ, ಅದು ಬಿಟ್ಟು ಎಷ್ಟೊಂದು ಜಯಂತಿಗಳಿವೆ. ಒಂದೊಂದು ಸರ್ಕಾರ ಒಂದೊಂದು ಜಯಂತಿ ಆಚರಿಸುವ ಪಾಠ ತಂದಿದ್ದಾರೆ. ಬಸವಣ್ಣ ಜಯಂತಿ ಬರೀ ಲಿಂಗಾಯತರು ಆಚರಿಸಿದರೆ, ಕನಕ ಜಯಂತಿ ಕೇವಲ ಕುರುಬರು ಆಚರಿಸುತ್ತಾರೆ. ಹಾಗಾಗಿ ಜಯಂತಿ ನಿಲ್ಲಿಸಬೇಕು. ಇಲ್ಲದಿದ್ದರೆ, ಆಡಳಿತದ ವೇಗ ಕಡಿಮೆಯಾಗಲಿದೆ. ಇದರಿಂದ ಅಭಿವೃದ್ಧಿ ವೇಗವೂ ನಿಲ್ಲಲಿದೆ'' ಎಂದರು.
ಅರಸು, ಸಿದ್ಧಗಂಗಾ ಶ್ರೀಗೆ ಭಾರತರತ್ನ ನೀಡಲು ಶಿಫಾರಸು ಮಾಡಿ: ''ಕೇಂದ್ರ ಸರ್ಕಾರ ಭಾರತ ರತ್ನ ಕೊಡುತ್ತಿದೆ. ಮಾಜಿ ಸಿಎಂ ದೇವರಾಜ್ ಅರಸು ಹೆಸರು ಶಿಫಾರಸು ಮಾಡಬೇಕು, ಕರ್ಪೂರಿ ಠಾಕೂರ್ಗೆ ಸರಿಸಮನಾಗಿ ನಿಂತವರು ಅರಸು. ಅವರಿಗೂ ಮರಣೋತ್ತರ ಭಾರತ ರತ್ನ ನೀಡಬೇಕು. 21 ಲಕ್ಷ ಎಕರೆ ಭೂಮಿಯನ್ನು ಯಾವುದೇ ರಕ್ತಪಾತ ಇಲ್ಲದೆ ಜನರಿಗೆ ಕೊಟ್ಟರು. ಹಾಗಾಗಿ, ಅವರಿಗೂ ಭಾರತರತ್ನಕ್ಕೆ ಶಿಫಾರಸು ಮಾಡಿ ಕಳಿಸಬೇಕು. ಅದೇ ರೀತಿ ಸಿದ್ಧಗಂಗಾ ಶ್ರೀಗಳ ಹೆಸರು ಶಿಫಾರಸು ಮಾಡಬೇಕು. ಶ್ರೀಗಳು ಎಲ್ಲೆಡೆ ತಿರುಗಿ ಲಕ್ಷಾಂತರ ಮಕ್ಕಳಿಗೆ ಅನ್ನ ಅಕ್ಷರ ನೀಡಿದ್ದಾರೆ'' ಎಂದರು.
''ಸರ್ಕಾರ ಐದು ಗ್ಯಾರಂಟಿ ನೀಡಿದೆ. ಆದರೆ, ಜನ ಎಲ್ಲಿ ಸುಸ್ತಾಗುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು. ಎಲ್ಲರಿಗೂ ಶಿಕ್ಷಣ ಜಾಗೃತಿ ಬಂದಿದೆ. ಪ್ರತಿಯೊಬ್ಬರೂ ಇಂದು ತಮ್ಮ ಮಕ್ಕಳನ್ನು ಸಿಬಿಎಸ್ಸಿ ಕಾನ್ವೆಂಟ್ನಲ್ಲಿ ಓದಿಸಲು ನಿರ್ಧರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಗುಮಾಸ್ತರವರೆಗೆ ಎಲ್ಲರೂ ಕಾನ್ವೆಂಟ್ ಅನ್ನುತ್ತಿದ್ದಾರೆ. ಹೀಗಾಗಿ, ಐದು ಗ್ಯಾರಂಟಿ ಜೊತೆಗೆ ಅಕ್ಷರ ಗ್ಯಾರಂಟಿ ಕೊಡುವ ಮೂಲಕ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಎಂದು ಘೋಷಿಸಬೇಕು'' ಎಂದರು. ''ಎರಡನೆಯದ್ದು, ಆರೋಗ್ಯ ದುಬಾರಿಯಾಗಿದೆ. ನಾವೆಲ್ಲ ಸೇರಿ ಅಷ್ಟು ದುಬಾರಿ ಮಾಡಿದ್ದೇವೆ. ನಾನು ಯಶಸ್ವಿನಿ ತಂದಿದ್ದೆ. ಸಿಎಸ್ಆರ್ ಕ್ರೋಢೀಕರಿಸಿ ತನ್ನಿ, ಈ ರಾಜ್ಯದ ಪ್ರತಿ ಮಗುವಿಗೂ ಉಚಿತ ಶಿಕ್ಷಣ ಹಾಗೂ ಪ್ರತಿ ವ್ಯಕ್ತಿಗೂ ಉಚಿತ ಆರೋಗ್ಯ ಯೋಜನೆ ಘೋಷಿಸಬೇಕು'' ಎಂದು ಸಲಹೆ ನೀಡಿದರು.
''ಜೊತೆಗೆ ಆರ್ಥಿಕ ವೇಗವೂ ಮುಖ್ಯ. ಬೆಳಗ್ಗೆ ಏಳುತ್ತಿದ್ದಂತೆ ಜಿಎಸ್ಟಿ ಶುರುವಾಗಲಿದೆ. ಎದ್ದಾಗ ಕಾಫಿಯಿಂದ ರಾತ್ರಿ ಮಲಗುವಾಗಲೂ ಜಿಎಸ್ಟಿ ಇದೆ. ಬಿಯರ್, ವಿಸ್ಕಿಗೆ ಜಾಸ್ತಿಯಾಗಿದೆ. ಹಾಗಾಗಿ, ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮದ್ಯಪಾನಿಗಳು ಇಂದು ತೆರಿಗೆ ದುಬಾರಿಯಿಂದ ಮದ್ಯ ವ್ಯಸನಿಗಳಾಗಿದ್ದಾರೆ ದಯಮಾಡಿ ಮತ್ತೊಮ್ಮೆ ತೆರಿಗೆ ಹೆಚ್ಚಳ ಪರಿಶೀಲಿಸಬೇಕು'' ಎಂದು ಆಗ್ರಹಿಸಿದರು.
ಪ್ರತ್ಯೇಕ ಹಣಕಾಸು ಸಚಿವರನ್ನು ನೇಮಿಸಿ:''ಸಿಎಂ ಪ್ರತ್ಯೇಕವಾಗಿ ಆರ್ಥಿಕ ಮಂತ್ರಿಯನ್ನು ಇರಿಸಿಕೊಳ್ಳುವುದು ಉತ್ತಮ, ನಿಮಗೆ ಸಮಯ ಇರಲ್ಲ, ಎಲ್ಲಾ ಇಲಾಖೆಯನ್ನೂ ನೀವು ನೋಡಬೇಕಾಗಲಿದೆ. ಆರ್ಥಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ರಾಜ್ಯದಿಂದ 500 ಲೋಡ್ ಹಳೆ ಕಬ್ಬಿಣ ತೆರಿಗೆ ವಂಚಿಸಿ ಹೋಗುತ್ತಿದೆ. ಆರ್ಥಿಕವಾಗಿ ಇದನ್ನು ಭದ್ರ ಮಾಡಬೇಕು. ಜನರ ಕಣ್ಣುಕಟ್ಟುತ್ತಿದ್ದೇವೆ. ಅಧಿಕಾರಿಗಳ ಸಂಬಳ, ಸಾರಿಗೆ, ಪಿಂಚಣಿ, ಸಾಲದ ಬಡ್ಡಿ ಸೇರಿ 2 ಲಕ್ಷ ಕೋಟಿ ರೂ. ಪ್ರತಿವರ್ಷ ಹೋಗುತ್ತಿದೆ. ಜನರ ತೆರಿಗೆ ಹೇಗೆ ಹೋಗುತ್ತಿದೆ ಎಂದು ನಾವು ಹೇಳಿಲ್ಲ. ಬೇರೆ ದೇಶದಲ್ಲಿ ತೆರಿಗೆದಾರರನ್ನು ಅಭಿನಂದಿಸಲಾಗುತ್ತದೆ. ಇಲ್ಲಿಯೂ ಅದಾಗಬೇಕು, 10 ಸಾವಿರ ಪೊಲೀಸರು ಹಿರಿಯ ಅಧಿಕಾರಿಗಳ ಕಾಫಿತೋಟದಲ್ಲಿ ಆರ್ಡರ್ಲಿಯಂತೆ ಕೆಲಸ ಮಾಡುತ್ತಿದ್ದಾರೆ. ಇದು ಯಾರಿಗೆ ಗೊತ್ತಿದೆ. ಅವರಿಗೆ ಸರ್ಕಾರದಿಂದ 50 ಸಾವಿರ ರೂ. ವೇತನ ನೀಡಲಾಗುತ್ತದೆ. ಆದರೆ, ಅವರನ್ನು ಕಾಫಿ ತೋಟದ ಖಾಸಗಿ ಕೆಲಸಕ್ಕೆ ಬಳಸಲಾಗುತ್ತದೆ. ಇದನ್ನೆಲ್ಲ ನೋಡಬೇಕಾದರೆ ಯಾರಿಗಾದರೂ ಒಬ್ಬ ಶಾಸಕರಿಗೆ ಹಣಕಾಸು ಇಲಾಖೆ ಕೊಡಿ, ಎಂಬಿಎ ಆದವರಿಗೆ ನೀಡಿ, ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಅವರು ಚೆನ್ನಾಗಿ ಆರ್ಥಿಕ ಇಲಾಖೆ ನಡೆಸಲಿದ್ದಾರೆ. ಆರ್ಥಿಕ ಇಲಾಖೆ ಜನರಿಗೆ ಹತ್ತಿರವಾಗಬೇಕು'' ಎಂದು ಸಲಹೆ ಕೊಟ್ಟರು.
''ಒಂದು ತಂಡ ರಚಿಸಿ ಆಡಳಿತದ ಬಗ್ಗೆ ಮತ್ತು ಆರ್ಥಿಕ ಇಲಾಖೆ ಬಗ್ಗೆ ವರದಿ ಪಡೆಯುವ ಕೆಲಸ ಮಾಡಿ. ಸೆಕ್ರೇಟರಿಯೇಟ್ನಲ್ಲಿ ವರ್ಗಾವಣೆಯೇ ಇಲ್ಲ, ಇಲ್ಲಿ ಬಂದು ಸಹಿ ಮಾಡಿ ಹೊರಗಡೆ ಹೋಗಿ ಒಳ ಉಡುಪು ಮಾರುವವರ ಹತ್ತಿರ ಹೋಗಿ ಕಾಲ ಕಳೆಯುತ್ತಿದ್ದಾರೆ. ಸಂಜೆ ಬಸ್ ವ್ಯವಸ್ಥೆ ಇದ್ದರೂ ಬೇಗ ಹೋಗುತ್ತಾರೆ. ಇದನ್ನೆಲ್ಲ ಯಾವ ಶಾಸಕರಾದರೂ ಗಮನಿಸಿದ್ದಾರಾ? ಹೀಗಾದರೆ ಹೇಗೆ ಆಡಳಿತ ನಡೆಸಲು ಸಾಧ್ಯ. ಆಡಳಿತದಲ್ಲಿ ಬಿಗಿಯಾದರೆ ಅಭಿವೃದ್ಧಿ. ಇದಕ್ಕಾಗಿ ಬಿಗಿ ಕ್ರಮ ಅಗತ್ಯ. ಅದಕ್ಕಾಗಿ ಪ್ರತ್ಯೇಕ ಹಣಕಾಸು ಸಚಿವರನ್ನು ನೇಮಿಸಿ'' ಎಂದು ಮನವಿ ಮಾಡಿದರು.
ಇದನ್ನೂ ಓದಿ:ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ: ಪರಿಶೀಲಿಸಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ